Wednesday, July 23, 2008

ಪೆನಾಲ್ಟಿ

ಹರೆಯ....


ಮನದನ್ನೆ ಬರದಂತೆ ತಡಿಬೇಡ ಅವಳನ್ನ ಅನ್ನುವ ಪ್ರೇಮಿ ಬರಗಾಲ ಇದ್ದರೂ ಭೂಮಿ ತೋಯ್ಸುವ ಮಳೆಗಿಂತ ತನ್ನನ್ನು ಆಲಿಂಗಿಸಿ ನವಿರು ಬೆವರಲ್ಲಿ ಮುತ್ತಿಕ್ಕುವ ಅವಳಿಗಾಗಿ ಬಯಸುತ್ತಾನೆ.ಅವಳ ಬರುವಿಕೆಗಾಗಿ ಕಟ್ಟಿರುವ ಮೋಡವನ್ನು ಬೇಡ್ಕೋತಾನೆ.ಹಾಗೆಯೆ ಅವಳು ಬಂದ ನಂತರ ಜಡಿಮಳೆಯೆ ಸುರಿದಲ್ಲಿ ಇನ್ನಶ್ಟು ಅಪ್ಪುಗೆಯ ಹೊತ್ತನ್ನು ನೀನು ಕರುಣಿಸಿದ ಹಾಗಾಗುತ್ತದೆ ಎಂದೆಲ್ಲ ಬೇಡುತ್ತಾನೆ.ಹರೆಯದ ಟೆಂಪರ್ಮೆಂಟ್ ನಲ್ಲಿ ಊರಿಗೆ ಕೆಡುಕಾದರೂ ಪರವಾಗಿಲ್ಲ ನನಗೆ ಹಿತವಿರಲಿ ಅನ್ನುವ ಪ್ರೀತಿಯ ಸ್ವಾರ್ಥ ಇರುತ್ತದೆ.

ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ ಆನಿಜದೊಟ್ಟಿಗೆ ಪ್ರೀತಿಗೆ ಮೊಂಡುತನವೂ ಇರುತ್ತದೆ.ಅವನ ಉಸಿರಲ್ಲಿ ಅವಳು ಉಸಿರಾಗಿರುವಶ್ಟು ದಿನ ಅವರಿಬ್ಬರಲ್ಲಿ ಅದೇನೋ ಅಯೋಮಯ.ಇವರೂ ಕುರುಡರು ಇವರು ಹತ್ತಿ ಕುಳಿತ ಕುದುರೆಯೂ ಕುರುಡು....ಪಯಣದ ದಾರಿ ಹೇಗಿರಬಹುದು...

ಅಂತೂ.....ಇಂತೂ....ಪ್ರೀತಿ ವ್ಯಾಮೋಹಕ್ಕೆ ತಿರುಗಿ ಅವನು ಇವಳನ್ನು...ಇವಳು ಅವನನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಅಂದಾಗ ಮನೆಯವರ ಬಲವಂತದ ಒಪ್ಪಿಗೆ ಇದ್ದೋ ಇಲ್ಲದೆಯೋ ಮದುವೆಯಾಗುತ್ತಾರೆ....ಮಕ್ಕಳ ಅಪ್ಪಾಮ್ಮ ಆಗುತ್ತಾರೆ ಹರೆಯದ ಕುದುರೆಯ ಜೀನು ಆ ಮಕ್ಕಳ ಬೇಕು ಬೇಡಗಳ ಮಧ್ಯೆ ಜಾರಿಹೋಗುತ್ತದೆ.ಏನೋ ಕಳಕೊಂಡ್ವಿ ಅನ್ನುವ ಭಾವ ಕಾಡೋಕೆ ಶುರುವಾಗುತ್ತೆ ಅಥವ ಸ್ವಲ್ಪ ಅವಸರ ಮಾಡಿದ್ವೇನೋ ಇನ್ನುಸ್ವಲ್ಪ ಹರೆಯದ ಸರಸಸುಖದ ಬೆನ್ನೇರಿ ಸವಾರಿಯಲ್ಲಿರಬಹುದಿತ್ತೇನೋ ಅನ್ನುವ ಕಾಡುವಿಕೆ ಶುರುವಾಗಿರುತ್ತದೆ.ಅಪವಾದವೆಂಬಂತೆ ಕೆಲವರು ಹರೆಯದ ಚೆಲ್ಲಾಟವಾಡಿದರು ನಂತರ ಸಮರ್ಪಕವಾಗಿ ಜೀವನದ ಲಗಾಮು ಗಟ್ಟಿಯಾಗಿ ಹಿಡಿದು ಆಚೀಚೆ ಹೆಜ್ಜೆ ಸರಿಯದಂತೆ ನೋಡಿಕೊಳ್ಳುವವರೂ ಇದ್ದಾರೆ....ಇಂಥಹವರಲ್ಲಿ ,ಮಳೆ ಜೋರಾಗಿ ಸುರಿಯುತ್ತಿದ್ದರು ಬರದ ಬಿಸಿಲು ಇದ್ದರು ಜೀವನದ ಸಾರದ ತೇವ ಒಂದೇ ತೆರನಾಗಿರುತ್ತದೆ.

ಆತುರದ ಸವಾರಿಯ ಅಮಲಲ್ಲಿ ಇದ್ದಂತಹವರಿಗೆ ನಿಜವಾದ ಸವಾರಿಯ ಅನುಭವ ಆಗಿರುವುದಿಲ್ಲ ಯರ್ರಾಬಿರ್ರಿ ಓಟದ ಸುಸ್ತು ಕಾಡುತ್ತೆ..... ಸಂಸಾರದ ಸಾರವೇ ಅರ್ಥವಾಗುವುದಿಲ್ಲ ಕೇವಲ ಇಶ್ಟಕ್ಕೆ .....ಎಂಬ ರಾಗ ಅವರ ಮೈಮೇಲೆ ಅವಾಹನೆಯಾಗಿರುತ್ತದೆ ಆಗ ಅವರಲ್ಲಿ ಯಾರಾದರೊಬ್ಬರು ಮನೆ ಹೊರಗಡೆ ಇದ್ದಾಗ ಮೋಡ ಮಳೆ ಕಟ್ಟಿದರೆ ಜೋರಾಗಿ ಇನ್ನಶ್ಟು ಜೋರಾಗಿ ಸುರೀಬಾರ್ದ ನೀನು, ನಾನು ಮನೆ ಸೇರುವ ಸಮಯ ಇನ್ನಶ್ಟು ತಡವಾಗುವಂತೆ.....ಅನ್ನುವ ನಿರಾಶಾಭಾವದ ಬೇಡಿಕೆ ಇರುತ್ತೆ.ಮನೆಯೊಳಗಿದ್ದರೆ ಹೊರಗೆ ಸುರಿಯುವ ಮಳೆಗೆ ಚುರ್ರ್ ಚುರ್ರ್ ಅನ್ನುವ ಮೆಣ್ಸಿಣ್ ಕಾಯಿ ಬಜ್ಜಿ ಮಾಡಿ ಅದರ ಮೇಲೆ ಒಂದಿಶ್ಟು ಟೀ ಹೀರುವ ಮನಸ್ಸೂ ಇವರಿಗಾಗಲ್ಲ .ಬದಲಾಗಿ ಈ ತರದ ಯೋಚನೆಗಳೆ ಅವರಿಗೆ ಹಿಂಸೆಕೊಡಲಾರಂಬಿಸುತ್ತದೆ.ಆದಶ್ಟು ಬೇಗ ಈ ಹಿಂಸೆಯಿಂದ ತಪ್ಪಿಸಿಕೊಂಡರೆ ಸಾಕೆಂದು ಮಳೆ ನಿಲ್ಲಲು ಬೇಡುತ್ತಾರೆ....ಅವಳನ್ನು ಆಚೆಹೋಗದಂತೆ ತಡೆಯುವಶ್ಟು ಜೋರಾಗಿ ನೀನು ಸುರೀಬಾರ್ದೆ ಅಂದವನೆ ಈಗ ಯಾಕೆ ನಿನಗೆ ಈ ರೀತಿ ಬಿಡದೆ ಸುರಿಯೋ ಕೆಟ್ಟ ಹಟ ಎಂದು ಶಪಿಸುತ್ತಾನೆ ಯಾವ ಮೂಲೆಯಲ್ಲಿ ಚತ್ರಿ ಇದೆ ಎಂದು ಅವಳೂ ಹುಡುಕುತ್ತಾಳೆ. ಹರೆಯ ಸ್ವಲ್ಪವೇ ಬಾಗಿದಾಗ ಯಾಕೀ ನಿರಾಸೆ.....ಇನ್ನು ಮುಪ್ಪಿನ ದಿನ ಹೇಗೋ ಎಂಬ ಭಯ......

ಹರೆಯವನ್ನು ATM ತರ ಬಳಸಿದಾಗ ಪೆನಾಲ್ಟಿಗಳು ಹಿಂಬಾಲಿಸುವುದು ಸಹಜವೆ.

ಹರೆಯ ಸಾಧನೆಯ ಕುದುರೆಯಾಗಿರಲಿ.....ಮಜಾ ಉಡಾಯಿಸುವ ಕುದುರೆಯಾಗದಿರಲಿ

ಕುದುರೆ ಕತ್ತೆಯಾದಾಗ ಅಪಹಾಸ್ಯದ ಗಂಟು ಹೊರುವ ಕಾಯಕ ತಪ್ಪಿದ್ದಲ್ಲ.

Tuesday, July 22, 2008

ಮೇರಾ ಭಾರತ್ ಮಹಾನ್ ಹೈ

ಅಣುಬಂಧ........ಇಡೀ ದೇಶ ಮಾತ್ರವಲ್ಲ ಪ್ರಪಂಚವೇ ಪಾರ್ಲಿಮೆಂಟಿನತ್ತ ನೋಡುತ್ತಿತ್ತು.ನಮ್ಮ ನಾಯಕರು ಬಟ್ಟೆ ಉಟ್ಟಂತೆಯೆ ಬೆತ್ತಲಾಗಿ ಕಾಣುತ್ತಿದ್ದರು.ಜವಾಬ್ದಾರಿ ಮರೆತವರ ಅಸಹ್ಯ ನಡವಳಿಕೆಯ ಕೇಂದ್ರದಂತಿತ್ತು.ದೇಶದ ಮಹತ್ತರ ವಿಚಾರದ ಚರ್ಚೆ ಜುಗಾರಿ ಕೇಂದ್ರದಂತಿತ್ತು.ಜೈಲಿನಿಂದ ಪರಾರಿಯಾದವರಿಗೆ ಗುಂಡಿಟ್ಟು ಸಾಯಿಸುತ್ತೇವೆ,ಆದರೆ ಇಲ್ಲಿ ರಾಜಮರ್ಯಾದೆಯಿಂದ ಕರೆಸಿ ಅವರಿಂದಲೆ ಬಹುಮತದ ಬಿಕ್ಶೆ ಬೇಡಿತ್ತು, ದೇಶ ನಡೆಸೋ ಪಾರ್ಟಿಗಳು.ಅಣುಬಂದಕ್ಕೆ ಸಹಿ ಹಾಕಿದರೂ ದಾಸ್ಯವೆ ಸಹಿ ಹಾಕದಿದ್ದರೂ ಕತ್ತಲ,ಶಕ್ತಿಯ ದಾಸ್ಯ ಎಂಬಂಥಾ ದುರ್ದೈವ ನಮ್ಮ ಪಾಲಿಗೆ. ಭಾರತ ಹುಟ್ಟಿನಿಂದಲೆ ದಾಸ್ಯದ ಆತ್ಮವೆಂದೇ ಬಾವಿಸಿಕೊಂಡು ನಂಬಿಕೊಂಡು ಮನಸಾ ಒಪ್ಪಿಕೊಂಡುನಮ್ಮ ಹಿರಿಯರನೇಕರು ಬದುಕಿದ್ದಾರೆ ನಾವೂ ಬದುಕುತ್ತಿದ್ದೇವೆ.ನಮ್ಮನ್ನು ಆಳುವುದಕ್ಕೆ ವಿದೇಶೀಯರೆ ಅತ್ಯಂತ ಅರ್ಹರು ಎಂದು ವಿನಯಾತಿವಿನಯದಿಂದ ಅವರ ಕಾಲಡಿಗೆ ಬಿದ್ದವರು ನಾವು.ಯಾರೇ ಬುದ್ದಿವಾದ ಹೇಳುವಾಗಲೂ ಚರಿತ್ರೆ ಮರೀಬೇಡ ಅಂತಾರೆ ನಾವು ಅದಕ್ಕೆ ತಕ್ಕಂತೆ ದಾಸ್ಯವನ್ನು ಬಿಡಲೇ ಇಲ್ಲ.ಗಂಡಸುತನವನ್ನ ಅಡವಿಟ್ಟುದಾಸ್ಯವನ್ನು ಒಪ್ಪಿಕೊಂಡಿದ್ದೇವೆಯೇ.......?

ಇನ್ನೊಂದು ದುರಂತ ಅಂದ್ರೆ ನಿಶ್ಟೆಕಮ್ಮಿಯವರು,ನಾವು ಬಡತನದ "ಕುರು"ಹಗಳೆಂದು ಬಾಯಿಬಾಯಿ ಬಡ್ಕೋತಾರೆ,ನಮ್ಮ ದೇಶಕ್ಕೆ ಬೇಡವಾದ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ,ಒಟ್ಟೊಟ್ಟಿಗೇ ತಮ್ಮನ್ನೂ,ನಮ್ಮೆಲ್ಲರನ್ನೂ ಇನ್ಯಾರಿಗೋ ಒಪ್ಪಿಸಿಕೊಳ್ಳುವ ಚಾಳಿ ಹುಟ್ಟಿನಿಂದಲೇ ಮುಂದುವರೆಸಿಕೊಂಡುಬಂದಿದ್ದಾರೆ.ಇವರಿಗೆತಮ್ಮ ಹೊರತಾಗಿ ಎಲ್ಲರ ಹಿತ ಮುಖ್ಯವಾಗಿಯೇ ಇಲ್ಲ. ಯಾವತ್ತಿಗೂ....ಆಗುವುದೂ ಇಲ್ಲವೇನೋ.....ಯಾರದೋ ಸೂತ್ರದ ಸೂತಕದವರು ಇವರು,ಯಾರದೋ ಸಿದ್ಧಾಂತದ ಕೂಸುಗಳಿವರು.

ಯಾವುದರಿಂದ ಹೆಚ್ಚುಲಾಭ ನಶ್ಟದ ಲೆಕ್ಕಪಕ್ಕಕ್ಕಿಟ್ಟು ಎಲ್ಲ ನಾಯಕರು ಯಾವ್ಯಾವುದೋ ಇಕ್ಕಟ್ಟು "ಪಕ್ಕಾಕಟ್ಟು"ಗಳಿಗೆ ಗಾಳ ಬಿದ್ದು ಸ್ವಾಭಿಮಾನ ಮಾರೋ ನಂಗಾನಾಚ್ನಲ್ಲಿ ತೇಲಿಹೋದರು.ಕೆಲ ಪಾರ್ಟಿ ನಾಯಕರಂತು ಕೊನೆದಿನದ ತನಕ ಯಾರ ಎಂಜಲು ಹೆಚ್ಚು ಸ್ವಾದ ಅನ್ನುವ ರೀತಿ ಹುಡುಕಾಡಿ ದೇಶಭಕ್ತಿಯ ಹೆಸರಲ್ಲಿ ತಮ್ಮ ಮೇಲೆ ತಾವೇ ವ್ಯಭಿಚಾರ ಮಾಡಿಕೊಂಡರು,ಇದಕ್ಕೊಂದಶ್ಟು ಜನ ಮೀಡಿಏಟರುಗಳು ಸಮರದಲ್ಲಿ ಸೈನಿಕರೂ ನಾಚುವಂತೆ ಹೋರಾಡಿದರು.ಇಂತಹವರನ್ನೂ ನಂಬದ ಕೆಲಜನ ಸ್ವಮೈಥುನಕ್ಕಿಳಿದು ನೇರವಾಗಿ ತಮ್ಮನ್ನು ಮಾರಿಕೊಂಡರು.ಇಂದು ಇವತ್ತಿನವರೆಗೆ ತಮ್ಮ ಪಕ್ಶದ ಸಿದ್ದಾಂತ ಹೀಗೆ ಎಂದು ಅರಚುತ್ತಿದ್ದ ನಾಯಕರು ಇಂದು ಪಾರ್ಲಿಮೆಂಟಿನಲ್ಲಿ ನಡೆದುಕೊಂಡ ರೀತಿ ನೋಡಿದರೆ ಇದು ಎಂಥಹವರಿಗು ಅರ್ಥವಾಗದ ವಿಚಾರವಲ್ಲ.

ಚುಣಾವಣಾ ಆಯೋಗ ಜನರಿಗೆ ದುಡ್ಡು ಹಂಚಿ ಓಟು ದೋಚುವ ಅಭ್ಯರ್ಥಿಗಳನ್ನು ಗುರುತಿಸಿ ಕೇಸು ಹಾಕುತ್ತದೆ ಆದರೆ ಇಲ್ಲಿ ಏನುಮಾಡಲು ಸಾಧ್ಯ.ಗಹಗಹಿಸುತ್ತ ಯಾರ ಅಂಜಿಕೆಯೂ ಇಲ್ಲದೆ ರಾಜಾರೋಶವಾಗಿ ಕೋಟಿ ಕೋಟಿ ಹಂಚುತ್ತಾರೆ.ಸ್ಪೀಕರ್ ಮುಂದೆಯೆ ಪ್ರದರ್ಶನವಾಗುತ್ತದೆ ಕೆಮರಾ ದೇಶಕ್ಕೂ ವಿದೇಶಕ್ಕೂ ಇದನ್ನು ತೋರಿಸುತ್ತದೆ ಇದಾವುದರ ಪರಿವೆ ಇಲ್ಲದ ಜೂಜುಕೋರರು ಕರ್ಕಶವಾಗಿ ಕಿರುಚಾಡುತ್ತಾ ಊಳಿಡುತ್ತಾ ತಮ್ಮ ಮೇಧಾವಿತನವನ್ನು ಪ್ರದರ್ಶಿವುದರಲ್ಲಿ ತಲ್ಲೀನರಾಗಿದ್ದರು. ಪ್ರತಿಯೊಬ್ಬ ಜನರ ಬಳಿಹೋಗಿ ನೋಟು ಹಂಚುವ ಕೆಲಸಕ್ಕಿಂತ ಮಧ್ಯವರ್ತಿಗಳ ಮೂಲಕ ರಖಂ ಆಗಿ ಹೀಗೆ ವಿಕ್ರಯಿಸುವುದು ಸುಲಭ ದಾರಿ ಅಂದುಕೊಂಡಿರುತ್ತಾರೆ.ಇಲ್ಲಿ ಯಾರದ್ದು ತಪ್ಪು ಕೊಟ್ಟವನದ್ದೋ ತಗೊಂಡವನದ್ದೋ.....ಸೂಳೆಗಾರಿಕೆಯಲ್ಲಿ ಪರವಹಿಸಿ ಮಾತಾಡಿದಂತಾಗುತ್ತದೆ.ಇಬ್ಬರೂ ನಾರುವವರೆ.ಮೈ ಮಾರುವಿಕೆಯಲ್ಲಿ ವ್ಯಕ್ತಿ ರೋಗ ತಗುಲಿಸಿಕೊಳ್ಳುತ್ತಾನೆ ಇಲ್ಲಿ ಸಮಾಜಕ್ಕೆ ರೋಗ ತಗುಲಿಸುತ್ತಾರೆ.....ದೇಶ ನರಳುತ್ತದೆ......ಆದರೂ ಇವರು ತೊದಲುತ್ತಾರೆ ದೇಶದ ಹಿತಕ್ಕಾಗಿ ಎಂದು.

ಅಂತು ಇಂತೂ ಏನೋ ಒಂದಾಗಿ ಕೆಲವರು ನಕ್ಕರು, ಮತ್ತಶ್ಟು ಬೈದರು,ನಿಮ್ಮ ತಲೆಯೊಳಗೇನಿದೆ ನೋಡಿಕೊಳ್ಳಿ ಅಂದರು.ಕೆಲವರು ಮುಖಕಪ್ಪಾಗಿಸಿಕೊಂಡರು ತಾವೇನು ಕಮ್ಮಿ ಅನ್ನುವಂತೆ ಮಾತಿನ ವಾಂತಿ ಮಾಡಿದರು.ಪಾರ್ಲಿಮೆಂಟಿನ ಒಳಗೆ ಎಶ್ಟು ಕುಲಗೆಟ್ಟಿತ್ತೋ ವಾತಾವರಣ,ಹೊರಗೂ ಇನ್ನೊಂದಶ್ಟು ನಾರುವಂತೆ ಅಚ್ಚುಕಟ್ಟಾಗಿ ನೋಡಿಕೊಂಡರು.

ಇಲ್ಲಿ ಯಾರೂ ಗೆದ್ದಿಲ್ಲ ಯಾರೂ ಸೋತಿಲ್ಲ....... ರಾಜಕೀಯದ ಸಾಂಕ್ರಾಮಿಕ ರೋಗ ಹರಡಿಸಿದರು......ಕುಲಗೇಡಿಗಳಾಗೋದು ಹೇಗೆ ಎಂದು ಮುಂದಿನವರಿಗೆ ಮಾದರಿಯಾದರು.....

ಸೋತರೂ ಗೆದ್ದರೂ ದೇಶದ ಹಿತಕ್ಕಾಗಿ ಅನ್ನುವ ಕುರುಹು ಅಲ್ಲೆಲ್ಲೂ ಇರಲಿಲ್ಲ.....ಕೊನೆಗೆ ಗೆದ್ದವರ ಅಣಕವಾಡುವ ನಗುವ ಮಧ್ಯೆ ಸೋತವರ ಕಪ್ಪಿಟ್ಟ ಮುಖದ ಮಧ್ಯೆ ತೇಲಿಬಂದ ರಾಶ್ಟ್ರಗೀತೆ ಯಾರಿಗೋ ಎಂಬಂತಿತ್ತು. ಸ್ಪೀಕರ್ ಸೈಲೆನ್ಸ್ ಅನ್ನುವವರೆಗೂ.

ಮೇರಾ ಭಾರತ್ ಮಹಾನ್ ಹೈ

Monday, July 14, 2008

ಪಾಚಿಹಳ್ಳ

ಮಧ್ಯಾಹ್ನವೇ ಮೋಡ ತೀರ ಕಪ್ಪಿಟ್ಟಿತ್ತು ಆ ಕಪ್ಪನ್ನು ಸೀಳುವಂತೆ ತನ್ನತನವನ್ನು ತೋರಿಸಲು ಮಿಂಚು ಜೋರಾಗಿ ಪಳಕ್ಕನೆ ಉದ್ದುದ್ದಕ್ಕೆ ಓಡುತ್ತಿತ್ತು ಹಿಮ್ಮೇಳದಲ್ಲಿ ದೊಡ್ಡ ಸದ್ದಿನ ಗುಡುಗು ಇತ್ತು.ತಣ್ಣಗಿನ ಚಳಿಇತ್ತು..ಮುದುಡಿಕೊಳ್ಳುವಂತ ವಾತಾವರಣ.....ಇದ್ದಕ್ಕಿದ್ದಂತೆ ಜೋರಾಗಿ ಮಳೆ ಶುರುವಾಯ್ತು.
ಪ್ರತಿ ವರ್ಶದ ಮಳೆಗೂ ಪಾಚಿಹಾಳ್ಳದ ಸೇತುವೆ ತುಂಬಿಹರೀತಿತ್ತು ಶಾಲಾಮಕ್ಕಳಿಗೆ ಮತ್ತು ಹೆಂಗಸರಿಗೂ ಆಗ ತೊಂದರೆಯಾಗುತ್ತಿತ್ತು.ಊರವರ ಬೇಡಿಕೆಯಂತೆ ಅಲ್ಲಿನ ತಾಲೂಕು ಪಂಚಾಯತ್ ಕಾಮಗಾರಿ ಕೈಗೊಂಡು ಹಳೆಸೇತುವೆ ಕೆಡವಿ ಹೊಸ ಸೇತುವೆ ಕಟ್ಟಿದ್ದರು.ಲೋಕಲ್ ಮಂಡಲ್ ಪಂಚಾಯತ್ ಅಧ್ಯಕ್ಶರರ ಉಸ್ತುವಾರಿ ಇತ್ತು.ಏನೂ ಮುಟ್ಟದೆ ಕೆಲಸ ಮುಗಿಸಿದರೆ ಅಪವಾದ ಅನ್ನುವಂತ ಕೈಕರಾಮತ್ತು ಸಣ್ಣದಾಗಿ ನಡೆದಿತ್ತು.ಈಗಪಾಚಿಹಳ್ಳಸೇತುವೆ ಸ್ವಲ್ಪ ಉದ್ದಕ್ಕು ಎತ್ತರಕ್ಕು ಬೆಳೆದಿತ್ತು.ಹೊಸ ಸೇತುವೆ ಕಟ್ಟೋದಕ್ಕಿಂತ ಹಳೆ ಸೇತುವೆ ಕೆಡವುದಕ್ಕೆ ಹೆಚ್ಚು ಸಮಯ ಮತ್ತುಅರ್ಧದಶ್ಟು ದುಡ್ಡು ತಿಂತಂತೆ.
ಇಂತಹ ಸೇತುವೆಯ ಪಕ್ಕದಲ್ಲಿಯೆ ಮಂಚೇಗೌಡರ ಒಂದು ಬಾಡಿಗೆ ಮನೆ ಇತ್ತು ಹೆಸರು"ಸುಗುಣ"
ಸುಗುಣದಲ್ಲಿ ಬಾಡಿಗೆಗೆ ಇದ್ದವನು ಮಂಚೇಗೌಡರ ಗೆಳೆಯ ವಿನಯ.ಅವನಿಗೆ ವಿಪರೀತ ಹುಡುಗಿಯರ ಚಟ ಆ ಕಾರಣಕ್ಕಾಗಿಯೆ ಪೇಟೆಗಿಂತ ಸ್ವಲ್ಪ ದೂರ ಇರುವಂತೆ ಮನೆ ಮಾಡಿದ್ದಾನೆ.ಮಂಚೇಗೌಡರಿಗೂ ಇದು ತಿಳಿಯದ ವಿಚಾರವೇನಲ್ಲ.ಬೋರಾದಾಗ ಅವರೂ ವಿನಯನ ಮನೆಯಲ್ಲಿ ಕಾಲ ಕಳೆದದ್ದುಂಟು.
ಇವತ್ತಿನ ಮಳೆ ಸೀಸನ್ ಮಳೆಯಲ್ಲ ಅಕಾಲಿಕ ಅದುತುಂಬಾ ಜೋರಾಗಿ ಸುರಿಯಲಾರಂಬಿಸಿದಾಗ ಇಡಿಯ ವಾತಾವರಣವೇ ಮಳೆಗಾಲವನ್ನು ಮೀರಿಸುವಂತಿತ್ತು.
ವಿನಯ ಬೆವರುತ್ತಿದ್ದ ಮುಖವನ್ನೊರಸುತ್ತ ಕಿಟಕಿ ಬಳಿಬಂದು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದ. ಮೈಯನ್ನೊಮ್ಮೆ ಲಟಿಕೆ ತೆಗೆಯುವಂತೆ ತಿರುಗಿಸಿದ ಅವನಲ್ಲಿ ತಾನೊಬ್ಬ ಮಹಾಗಂಡಸು ಅನ್ನುವ ಬೇಡವಾದ ಅಹಂಕಾರ ಮನೆಮಾಡಿತ್ತು.ಸಿಗರೇಟು ಹಚ್ಚಿದವನೆ ತಿರುಗಿ ಮಂಚದತ್ತ ನೋಡುತ್ತಾನೆ ಸೋತ ಬಂಗಿಯಲ್ಲಿ ಅಡ್ಡದಿಡ್ಡಿ ಮಲಗಿದ್ದ ಇಬ್ಬರು ಹುಡುಗಿಯರ ನಗ್ನ ದೇಹಗಳಿದ್ದವು.ಇವನ ನೋಟಕ್ಕೆ ಅವರು ನಿನ್ನ ಬಳಿ ಸಾಧ್ಯೈಲ್ಲ ಅನ್ನುವಂತೆ ಮುಖಭಾವ ಮಾಡಿದರು ವಿನಯ ಮತ್ತಶ್ಟು ಗೆಲುಮುಖದವನಾದ.
ಹೊರಗಡೆ ಧಾರಾಕಾರ ಮಳೆ ಹಟಕ್ಕೆಬಿದ್ದಂತೆ ಬೀಳುತ್ತಿತ್ತು.ಪಾಚಿಹಳ್ಳವು ವಿನಯನಂತೆ ತುಂಬಿಹರಿಯುವ ಯೌವ್ವನಾವಸ್ಥೆ ಪಡೆದಿತ್ತು ಉಕ್ಕುವ ರಭಸದಲ್ಲಿ ಸುತ್ತಲಿನ ಬಗ್ಗೆ ಗಮನವೇ ಇರಲಿಲ್ಲ,ತನ್ನಿಂದೇನು ಕೆಡುಕಾಗಬಹುದು ಎಂಬುದರ ಪರಿವೆಯೇ ಇರಲಿಲ್ಲ.ಹುಲುಸಾಗಿ ಬೆಳೆದಿದ್ದ ಪ್ರೀತಿಯಿಂದ ಬೆಳೆದಿದ್ದ ರೈತರ ಶ್ರಮವನ್ನು ಯಾವಕನಿಕರವೂ ಇಲ್ಲದೆ ನೆಕ್ಕುತ್ತ ಮುಳುಗಿಸುತ್ತ ಸಾಗಿತ್ತು ಬಲಾತ್ಕಾರ.ಸೇತುವೆಗೆ ಸ್ವಲ್ಪ ಎತ್ತರಕ್ಕೆ ಬೀಡಾಡಿಗಳ ಒಂದು ಚಿಕ್ಕ ಟೆಂಟ್ ಇತ್ತು ಮೇಲಿಂದ ಸುರಿಯೋ ಮಳೆಗೇ ತತ್ತರವಾಗಿತ್ತು ಈಗ ಬುಡದಿಂದಲೇ ನೀರಾಕ್ರಮಣ ಶುರುವಾಗಿತ್ತು.ಅಲ್ಲಿದ್ದ ಪುಟ್ಟ ಹುಡುಗಿ ಮಿನ್ನು ಇರೋಬರೋದನ್ನು ಎತ್ತಿಕೊಳ್ಳುತ್ತಿದ್ದಂತೆ ಕೆಲ ಗಂಡಸರು ಬಂದು ಬೀಡಾಡಿ ಜನರಿಗೆ ಬೈಯ್ಯುತ್ತ ಮಿನ್ನುವನ್ನು ಎತ್ತಿಕೊಂಡು ಇನ್ನೂ ಸ್ವಲ್ಪ ಎತ್ತರದ ಜಾಗಕ್ಕೆ ತಲುಪುತ್ತಿದ್ದಂತೆ ಅವರ ಹಿಂದೆಯೆ ನಾಯಿ ಗುಲ್ಲಿಯು ಹಿಂಬಲಿಸಿತ್ತು.ಆ ಮಿನ್ನುವಿನ ಅಪ್ಪಾಮ್ಮಹೊಟ್ಟೆಪಾಡಿಗೆ ಪೇಟೆಗೆ ಹೋದವರು ಇನ್ನೂ ಬಂದಿರಲಿಲ್ಲ.ನಾಯಿ ಗುಲ್ಲಿ , ಮಿನ್ನು ಮತ್ತು ಜನರನ್ನು
ಅಳುತ್ತಾ ಸ್ವಲ್ಪ ಹಿಂಬಾಲಿಸಿದವಳೆ ಮತ್ತೆ
ಜೊರಾಗಿ ಅರಚುತ್ತ ಟೆಂಟಿನ ಬಳಿ ಬರುವಾಗ ನೀರು ಗುಲ್ಲಿಯ ಮೂವರು ಮಕ್ಕಳಿದ್ದ ಬುಟ್ಟಿಯನ್ನು ಅಲುಗಾಡಿಸುತ್ತಿತ್ತು.ಗುಲ್ಲಿ ಬುಟ್ಟಿಯ ಮೇಲೆ ಹತ್ತಿ ಕುಳಿತರು ಪ್ರಯೋಜನವಾಗಲಿಲ್ಲ ಹೊರಗೋಡಿ ಬಂದು ಮಿನ್ನುವನ್ನು ನೊಡುತ್ತ ಶಕ್ತಿಇದ್ದಶ್ಟು ಜೋರಾಗಿ ಬೊಗಳುವುದಕ್ಕೆ ಶುರು ಮಾಡಿದಾಗ ಮಿನ್ನುವಿಗೆ ಜನಬಂದುಗಡಿಬಿಡಿ ಮಾಡಿದಾಗ ಸಹಾಯದ ನೆಪದಲ್ಲಿ ಅವಹೇಳನಮಾದುತ್ತಿದ್ದಾಗ ಮರೆತುಬಿಟ್ಟ ಗುಲ್ಲಿ ಮತ್ತು ಅವಳ ಮಕ್ಕಳ ನೆನಪಾಗಿ ಕಿರುಚಿಕೊಂಡವಳೇ ಟೆಂಟಿನ ಹತ್ತಿರ ಓಡುತ್ತಾಳೆ ಜನರಿಗೆ ಏನೆಂದು ತಿಳಿಯುವುದಿಲ್ಲ.ಮಿನ್ನು ಬರುವುದನ್ನು ನೋಡಿದ ಗುಲ್ಲಿ ಒಂದು ಸರ್ತಿ ಖುಶಿ ಪಟ್ಟು ಟೆಂಟಿನ ಕಡೆ ಮುಖ ಮಾಡಿದಾಗ ನೀರು ಅದಾಗಲೇ ಕುಡಿಗಳನ್ನು ತೇಲಿಸಿಕೊಂಡು ತನ್ನೊಂದಿಗೆ ಕರೆದೊಯ್ಯುತ್ತಿತ್ತು. ಗುಲ್ಲಿ ನೀರಿಗಿಳಿದು ಈಜುವ ಪ್ರಯತ್ನ ಮಾಡಲಾರಂಬಿಸಿ ಆಗ್ತಾ ಇಲ್ಲ ಎಂದು ಅಳುತ್ತಾ ಮೇಲಕ್ಕೆ ಬಂತು .ಮಿನ್ನು ಮತ್ತು ಗುಲ್ಲಿಯ ಅಳುವಿಗೆ ಜನ ಹತ್ತಿರ ಬಂದರು .ಗುಲ್ಲಿಯ ಮರಿಗಳಿದ್ದ ಬುಟ್ಟಿ ಅದಾಗಲೇ ತುಂಬ ದೂರ ತೇಲಿತ್ತು.ಗುಲ್ಲಿ ಎಲ್ಲರಲ್ಲೂ ಬೇಡುತ್ತಿತ್ತು ಆದರೆ ಅವರೆಲ್ಲರೂ ನಿಸ್ಸಹಾಯಕರಾಗಿದ್ದರು.ಆಮರಿಗಳನ್ನು ತನ್ನ ಮಡಿಲಲ್ಲೇ ಇಟ್ಟುಕೊಂಡು ಮುದ್ದು ಮಡುತ್ತಿದ್ದ ಮಿನ್ನುವಿನ ಅಳು ನೋಡಿ ಒಂದಿಬ್ಬರು ಕಂಬಳಿ ಹೊದ್ದುಕೊಂಡಿದ್ದ ಹೆಂಗಸರು ತಮ್ಮೊಂದಿಗೆ ಸೇರಿಸಿಕೊಂಡರು.ಗುಲ್ಲಿ ಇನ್ನು ಜನರನ್ನು ಬೇಡಿ ಏನೂ ಪ್ರಯೋಜನ ಇಲ್ಲ ಎಂದರಿತವಳೇ ತಾನೂ ನೀರಿಗೆ ದುಮುಕಿದಳು ಮಿನ್ನು ಕಿರುಚಾಡುತ್ತಳೇ ಇದ್ದಳು ......ಗುಲ್ಲಿ ಜನರ ಕಣ್ಣ ನೋಟಶಕ್ತಿಯಿಂದ ಮರೆಯಾದಳು.
ಸೇತುವೆಯ ಒಂದು ಬದಿ ನೀರ ಕೊರೆತಕ್ಕೆ ಸಿಕ್ಕು ಸಂಪರ್ಕ ಕಡಿದುಕೊಂಡಿತು.ವಿನಯನ ಮನೆಕಡೆಯಿಂದ ನಿಂತಿದ್ದ ಮಿನ್ನುವಿನ ಅಪ್ಪಾಮ್ಮ ಆಚೆ ಹೋಗಲಾರದೆ ಕಡಿದುಹೋಗಿರುವ ತಮ್ಮ ಟೆಂಟಿನ ಕಡೆಗೇ ನೋಡುತ್ತ ಜೋರಾಗಿ ಕೂಗು ಹಾಕುತ್ತಿದ್ದರು.ಆ ಬದಿಯಿಂದ ಅವರಿಗೆ ಮಿನ್ನು ಗುಲ್ಲಿ ಮತ್ತು ಮರಿಗಳು ನೀರು ಪಾಲಾದುದನ್ನು ತಲೆಗೆ ಲಟಿಕೆ ಹಾಕುತ್ತಿದ್ದ ಮಳೆಯಲ್ಲಿಯೇ ಕೂಗಿ ಹೇಳುವ ಪ್ರಯತ್ನ ಮಾಡುತ್ತಿದ್ದಳು. ನೀರ ಸದ್ದಲ್ಲಿ ಅವರ ಧ್ವನಿಯ ಸದ್ದಡಗುತ್ತಿತ್ತು ಆಚೀಚೆ ಕೇಳಿಸುತ್ತಿರಲಿಲ್ಲ.ವಿನಯನಿಗೆ ಮಿನ್ನುವಿನ ಅಪ್ಪಾಮ್ಮ ಹತ್ತಿರದಲ್ಲೇ ಇದ್ದುದರಿಂದ ಕಿರುಚಾಟಕ್ಕೆ ರಸಾಭಂಗವಾಗುತ್ತಿತ್ತು.ಮಂಚದ ಇಕ್ಕೆಲಗಳಲ್ಲಿದ್ದ ತತ್ಕಾಲ ಸಂಗಾತಿಯರನ್ನ ಆಚೆ ಸರಿಸಿದವನೇ ಕಿಟಕಿ ಬಳಿ ಬಂದು ಅವರನ್ನು ಕೆಟ್ಟದಾಗಿ ಬೈಯ್ಯಬೇಕೆಂದು ಬಾಯಿ ತೆಗೆದವನ ಮೊಬೈಲು ರಿಂಗಾಯ್ತು ಅತ್ತಲಿಂದ ಅಕಾಲ ಮಳೆಗೆ ಸೋತ ಇನ್ನೊಂದು ಇನಿದನಿಯಿತ್ತು. ಮಾತಾಡುತ್ತ ಮತ್ತೆ ಕಿಟಕಿ ಬಳಿಬಂದ ಪಾಚಿಹಳ್ಳದಲ್ಲಿ ಮಣ್ಣುಮಿಶ್ರಿತ ಕೆಂಪಗಿನ ನೀರು ತುಂಬ ಅಗಲವಾಗಿ ಹರಿಯುತ್ತಿತ್ತು.ಸೇತುವೆಯು ಮುಳುಗುವ ಹಂತಕ್ಕೆ ಬಂದಿತ್ತು,ಮೊನ್ನೆಮೊನ್ನೆ ಊರಿಗೆ ನಾನೇ ಅನಿವಾರ್ಯ ಎಂದು ಬೀಗುತ್ತಿದ್ದ ಸೇತುವೆಯ ಅಸ್ತಿತ್ವ ಪ್ರಶ್ನಾರ್ಥಕ ಚ್ಹಿನ್ನೆಯಾಗುವ ಹಾಗಿದೆ.ವಿನಯ ತನ್ನನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಂಡ ಬೆತ್ತಲೆಯಾಗಿ .ಅವನ ಯೌವ್ವನ ಅವನಿಗೆ ಪ್ರಶ್ನೆ ಹಾಕತೊಡಗಿತು.ತಾನು ಯಾವತ್ತೂ ಸೋಲೋದೆ ಇಲ್ಲ ಅನ್ನುವ ರೀತಿಯಲ್ಲಿದೇಹದ ಅಂಗಾಂಗಗಳನ್ನು ಪೈಲ್ವಾನರ ಹಾಗೆ ಉಬ್ಬಿಸಿ ನೋಡಿಕೊಂಡ. ಹಿಂಬದಿಯಿಂದ ಬಂದು ನೇತುಬಿದ್ದ ಸಂಗಾತಿಗಳಿಗೆ ಲೆಕ್ಕ ಮಾಡದೆ ಕೆಲವು ನೋಟುಗಳನ್ನು ಕೊಟ್ಟ.ಹೊರಡುವಂತೆ ಸನ್ನೆ ಮಾಡಿದ.
ಗೋಡೆಗಳ ಮಧ್ಯೆ ಮಾನ ದುಡ್ಡಿನ ಹಂಗಲ್ಲಿ ಬೆತ್ತಲಾಗಿ ಕರಗಿ ಹೋಯ್ತು........ಬಯಲಲ್ಲಿ ಗುಲ್ಲಿಯ ಪ್ರಾಣ...... ಸಂತಾನದ ಹಂಗಲ್ಲಿ ಕೊಚ್ಚಿ ಹೋಯ್ತು.

Sunday, July 13, 2008

ಸಾವು ಕಿವಿಯಲ್ಲಿ ಉಸುರುತ್ತದಾ

ಇಚ್ಚೆ ಕೆಲವರ ಸಾವಿನ ದಿನವನ್ನು ನಿರ್ಧರಿಸುತ್ತ.......?

ನನ್ನ ಅಜ್ಜನ ಹೆಸರು ರಾಮಣ್ಣ ಆದರೆ ಅವರು ಹೆಸರು ಬರೆಯುತ್ತಿದ್ದುದು ರಾಮಂಣ ಅದ್ಯಾಕೊ ಗೊತ್ತಿಲ್ಲ ಅವರ ಪ್ರಕಾರ ಅದುವೆ ಸರಿಯಂತೆ.ಅವರದು ವಿಚಿತ್ರ ಸ್ವಭಾವ. ಯಾರನ್ನು ಸುಲಭವಾಗಿ ನಂಬುವವರಲ್ಲ ಲೆಕ್ಕಾಚಾರದಲ್ಲೂ ಪಕ್ಕಾ.ಬೆಳಿಗ್ಗೆ ಎದ್ದು ಗದ್ದೆಕಡೆ ಹೋದ್ರೆ ಪುಣಿ ಅಂದ್ರೆ ಗದ್ದೆಯ ಬದಿಯ ಎತ್ತರದ ಜಾಗದಲ್ಲಿರುವ ತೆಂಗಿನ ಮರದಲ್ಲಿ ಎಳನೀರು ಎಶ್ಟಿದೆ ತೆಂಗಿನಕಾಯಿ ಎಶ್ಟಿದೆ ಎಂಬುದನ್ನ ಕೆಳಗೆ ನಿಂತೆ ಲೆಕ್ಕ ಹಾಕಬಲ್ಲಂತಹವರು ಒಂದು ಕಮ್ಮಿ ಆಗಿದ್ದರು ರಂಪ ಮಾಡೋರು ಯಾರ್ಯಾರ್ ಮೇಲೋ ಅನುಮಾನ ಪಡೋರು. ಮಳೆಗಾಲದಲ್ಲಿ ಜೋರಾಗಿ ಗಾಳಿ ಮಿಂಚು ಸಿಡಿಲು ಬಂದರೆ ಸಾಕು ರಾಮ.....ರಾಮ ಎಂಬ ಜಪ ಶುರು ಮಾಡುತ್ತಿದ್ದರು ಅವರ ಆ ಭಂಗಿ ನೋಡಿಯೆ ನಮಗೆ ಇವತ್ತು ಪ್ರಳಯ ಆಗಿ ಬಿಡುತ್ತೇನೋ ಅನ್ನುವ ಭಯ ಬರುತ್ತಿತ್ತು.ಅದಕ್ಕಿಂತಲೂ ನಮಗೆ ಇನ್ನೊಂದು ಭಯ ಕಾಡುತ್ತಿದ್ದುದು ಚಿಕ್ಕಂದಿನಲ್ಲಿ ನಮ್ಮ ತಲೆಗೂದಲು ಬೆಳೆದಾಗ ಆಗುತ್ತಿತ್ತು. ಬಂಡಾರಿ ಶಾಪಿಗೆ ಕರ್ಕೊಂಡ್ ಹೋಗಿ ಇನ್ನು ಐದು ತಿಂಗಳು ಅಂದ್ರೆ ಸಾಕಿತ್ತು ಬಂಡರಿ ಕೈಯಲ್ಲಾಡಿಸುವ ಮೆಶಿನ್ನಿನಿಂದ ಆರು ತಿಂಗಳು ಆಕಡೆ ತಲೆ ಹಾಕದಂತೆ ಮಾಡುತ್ತಿದ್ದ.ಅಜ್ಜನಿಗೆ ನಮ್ಮ ತಲೆ ನೇವರಿಸಿದಾಗ ಏನೋ ನೆಮ್ಮದಿ ನಮಗೋ ಶಾಲೆಯಲ್ಲಿ ಮಿಕ್ಕ ಹುಡುಗರು ಮಾಡುವ ಕೀಟಲೆ ನೆನೆದು ಅಳು ಬರುತ್ತಿತ್ತು.

ಅಜ್ಜನಿಗೆ ಅತಿ ಬಿಸಿಯಾದ ನೀರ ಸ್ನಾನ ಅಂದ್ರೆ ಬಲು ಪ್ರೀತಿ. ನಮ್ಮ ಕೈಯಿಂದ ಮುಟ್ಟಲು ಆಗದಂತ ಬಿಸಿ ಹೇಗೆ ಮೈಮೇಲೆ ಸುರಿದುಕೊಳ್ಳುತ್ತಿದ್ದರೋ......ಬೇಸಿಗೆಯ ರಣ ಬಿಸಿಲಲ್ಲು ನೀರ ಹಂಡೆಯ ಎದುರು ಕುಳಿತು ಚಳಿ ಕಾಯಿಸುತ್ತಿದ್ದರು.

ನನ್ನ ಮೇಲೆ ಅವರಿಗೆ ಮನೆಯ ಮಿಕ್ಕವರಿಗಿಂತ ವಿಶ್ವಾಸ ಜಾಸ್ತಿ ಇತ್ತು ಆದ ಕಾರಣ ಅವರಬಳಿ ಇದ್ದ ದುಡ್ಡುಕಾಸಿನ ಸಂಪೂರ್ಣ ವಿಚಾರ ನಂಗೆ ತಿಳಿದಿತ್ತು ಮನೆಯಲ್ಲಿ ಬೇರೆಯವರಿಗೆ ದುಡ್ಡಿನ ಅವಶ್ಯಕತೆ ಇದ್ದರೆ ಅದು ನನ್ನ ಮುಖಾಂತರ ಡೀಲ್ ಆಗ್ತಿತ್ತು.ಅವರ ಕಬ್ಬಿಣದ ಪೆಟ್ಟಿಗೆಯ ತುಂಬ ಬೇರೆ ಬೇರೆ ಸೈಜಿನ ಪುಸ್ತಕಗಳಿರುತ್ತಿತ್ತು ಅದಕ್ಕೆ ತಕ್ಕಂತೆ ಮೊತ್ತಾದಾರಿತ ನೋಟುಗಳು ಅವುಗಳ ಮಧ್ಯೆ ಮನೆ ಮಾಡುತ್ತಿದ್ದವು.

ಡಿಗ್ರಿ ಎಂಬ ಕಾಟಾಚಾರದ ವರುಶಗಳನ್ನು ಮುಗಿಸಿ ಊರು ಬಿಟ್ಟ ಮೇಲೆ ಹಲವಾರು ಕಾರಣಗಳಿಂದ ಒಂದೆರಡು ವರ್ಶ ಮನೆ ಕಡೆ ತಲೆ ಹಾಕ್ಲಿಲ್ಲ ಆ ಸಮಯದಲ್ಲಿ ಅಜ್ಜನಿಗೂ ಆರೋಗ್ಯ ತೀರ ಹದಗೆಟ್ಟಿತ್ತು ಇನ್ನೊಬ್ಬರ ಮುಖಾಂತರ ವಿಶಯ ತಿಳಿದು ಊರಿಗೆ ಹೋದಾಗ ಅಜ್ಜ ಸದ್ದಿಲ್ಲದೆ ಮಲಗಿದ್ದರು ತೀರ ನಿತ್ರಾಣವಾಗಿದ್ದರು ಅಮ್ಮ ಅಜ್ಜಿ ನಿನ್ನನ್ನ ನೋಡ್ಲೇ ಬೇಕೆಂದು ತುಂಬಾನೆ ಹಟ ಹಿಡಿದಿದ್ರು ಅನ್ನುವ ಮಾತು ಅವರ ಕಿವಿಗೆ ಬಿತ್ತೇನೊ,ಏಳೆಂಟು ದಿನಗಳಿಂದ ಮಲಗಿದವರು ಎದ್ದು ಕೂತರು ನನ್ನ ಪಕ್ಕ ಕೂರಿಸಿ ಕ್ಶೇಮ ಸಮಾಚಾರ ವಿಚಾರಿಸಿದರು ನನಗೆ ಕುಡಿಯೋದಕ್ಕೆ ಚಾ ಕೊಡಿ ಅಂದರು.

ನನ್ನ ಚಾ ಕುಡಿದಾಯಿತು ಅಜ್ಜ ಗೆಲುವಾದರು ಎಲ್ಲರು ಅದನ್ನು ಗಮನಿಸಿ ಪ್ರೀತಿದ ಪುಲ್ಲಿನ್ ತೂಯಿಕೂಡ್ಲೆ ಉಸಾರ್ ಆಯೆರ್(ಪ್ರೀತಿಯ ಮೊಮ್ಮಗನನ್ನು ನೋಡಿ ಸರಿ ಹೋದ್ರು)ಅಂದ್ರು. ಅಜ್ಜ ನನ್ನನ್ನು ಮತ್ತೆ ಹತ್ತಿರ ಕರೆದು ಅಜ್ಜಿಯನ್ನೂ ಕರೆದು ಏನೋ ಸನ್ನೆ ಮಾಡಿದ್ದನ್ನ ಅವರು ಅರ್ಥ ಮಾಡಿಕೊಂಡು ಒಳಗಿನ ಕೋಣೆಯಿಂದ ಅವರ ಪೆಟ್ಟಿಗೆ ತೆರೆದು ನೂರರ ಒಂದು ನೋಟು ತಂದು ಅಜ್ಜನ ಕೈಗಿಟ್ಟರು.ಅಜ್ಜನಿಗೆ ಅದೇನೊ ಖುಶಿ ನನ್ನ ತಲೆ ನೇವರಿಸಿ ಬೆನ್ನು ತೀಡಿದವರೆ ಆ ನೂರರ ನೋಟನ್ನು ನನ್ನ ಕೈಗಿಟ್ಟರು.

ಇದೆಲ್ಲವು ನಡೆಯುವುದಕ್ಕೆ ಮುನ್ನ ತೀರ ಹುಶಾರು ತಪ್ಪಿದಾಗ ಎಲ್ಲಾ ಆತ್ಮೀಯರನ್ನ ಬರಹೇಳಿಸಿ ನಂದಿನ್ನು ಮುಗೀತು ಅಂದಿದ್ರಂತೆ ಹಾಗೆ ಮಲಗಿದವರಿಗೆ ಸಂಬದಿಕರೆಲ್ಲ ಅವರ ಬೇಡಿಕೆಯಂತೆ ಎರಡೆರಡು ಸಲ ಬಂದುಹೋಗಿ ನೀರು ಬಿಟ್ಟಿದ್ದು ಆಗಿತ್ತಂತೆ......ಇದು ಮಿಕ್ಕವರಿಗೆ ಒಂದು ತಮಾಶೆಯನ್ನಿಸಿದಾಗ ಇನ್ನೊಬ್ಬ ಬಾಕಿ ಇದ್ದಾನೆ ಅವ ಬರದೆ ನನ್ನ ಪ್ರಾಣ ಹೋಗೋದಿಲ್ಲ ಅಂದಿದ್ರಂತೆ.......ನಾನೀಗ ಅಜ್ಜನ ಪಕ್ಕದಲ್ಲಿದ್ದೇನೆ ಅಜ್ಜನಿಗೆ ಕುಶಿಯಾಗಿದೆ ಹರಸಿಯಾಗಿದೆ, ಅವರೂ ಸ್ವಲ್ಪ ಆಹಾರ ತಗೊಂಡಿದ್ದೂ ಆಯಿತು ಗೊರಗೊರ ಮಾತು ಅವ್ಯಾವಹತವಾಗಿ ಬರ್ತಾನೆ ಇತ್ತು ಸುಸ್ತು ಮಾಡ್ಕೋಬೇಡಿ ಅಂದ ಅಮ್ಮ ಇನ್ನೂ ಕುಳಿತಿದ್ದ ಅಜ್ಜನನ್ನು ಮಲಗಿಸುವ ಸಲುವಾಗಿ ನನಗೆ ಅವರ ಭುಜ ಹಿಡಿಯಲು ಹೇಳಿ ಅವರು ಕಾಲು ಹಿಡಿದುಕೊಂಡರು ಅಮ್ಮನ ಮುಖ ಪಿಚ್ಚಾಯಿತು ಕಾಲಿನಿಂದ ತಣ್ಣಗಿನ ಅಜ್ಜನ ಸಾವು ಮೇಲೇರುತ್ತಿತ್ತು ಅಜ್ಜನ ಮುಖ ನೋಡಿದಾಗ ತನಗೂ ಗೊತ್ತೆಂಬಂತೆ ತಲೆಯಾಡಿಸಿದರು.ಕೊರಗಜ್ಜ.......

ಆಟದ ಕೊರಗಜ್ಜ ಕತೆಗಾರ ಕೊರಗಜ್ಜ ಮುಂತಾದ ಹೆಸರಲ್ಲಿ ಕರೆಯಲ್ಪಡುತ್ತಿದ್ದ ಕೊರಗ ಒಂದು ಕಾಲದಲ್ಲಿ ನಮ್ಮೊರ ಪಟೇಲರಿಗೆ ಬಾಡಿಗಾರ್ಡ್ ಆಗಿದ್ದವನು.ಊರಿನ ಚರಿತ್ರೆಯ ವರ್ಣರಂಜಿತ ದಿನಗಳನ್ನು ಕೊರಗ ಹೇಳಿದನೆಂದರೆ ಅವತ್ತಿನ ಇಡೀ ದಿನ ಅದಕ್ಕೆಂದೇ ಮೀಸಲು.ಮಾಗಿದ ವಯಸ್ಸಲ್ಲಿ ದುಡಿದರೆ ಜೀವನ ಅನ್ನುವ ರೀತಿಯ ಬದುಕುಕೊರಗಜ್ಜನದು.ಆ ವಯಸ್ಸಲ್ಲು ಈಗಿನ ಯುವಕರಿಗಿಂತ ಚೆನ್ನಾಗಿ ಕೆಲಸ ಮಾಡಿ ಮಧ್ಯಾಹ್ನದ ಬಿಡುವು ಮತ್ತು ಸಾಯಂಕಾಲದ ಹೊತ್ತಲ್ಲಿ ಇಸ್ಪೀಟಾಟದ ಹುಚ್ಚು ವಿಪರೀತವಗಿತ್ತು.ಆಡಲು ಯಾರೂ ಕಂಪನಿ ಸಿಕ್ಕಿಲ್ಲ ಅಂದ್ರೆ ಆಟದ ಕತೆಗಳಿಗೆ ಕೊರತೆಯಿರಲಿಲ್ಲ,ಮಧ್ಯೆಮಧ್ಯೆ ಆಟ ನೋಡಲು ಬಂದಿದ್ದ ಹುಡುಗ ಹುಡುಗಿ ಯಾವ ರೀತಿ ವರ್ತಿಸುತ್ತಿದ್ದರು ಎಶ್ಟು ಹೊತ್ತಿಗೆ ಆಟದಿಂದ ಎದ್ದು ಹೋದ್ರು ಮತ್ತೆ ಎಶ್ಟು ಹೊತ್ತಿಗೆ ಒಳಗೆ ಬಂದ್ರು ಇವನ್ನೂ ಸೇರಿಸಿ ಹೇಳುತ್ತಿದ್ದ.ಈರೀತಿಯ ಅಜ್ಜನ ಕಣ್ಣಿಗೆ ಅದೆಶ್ಟೋ ಜೋಡಿಗಳುತಪ್ಪಿಸಿಕೊಂಡ್ರೆ ಸಾಕು ಅನ್ನುವ ಹಾಗೆ ಭಯ ಪಡುತ್ತಿದ್ದರು ಇಲ್ಲದಿದ್ದಲ್ಲಿ ಮರುದಿನ ಅವರು ಊರ ಕತೆಯಾಗುತ್ತಿದ್ದರು.
ನನ್ನ ತಂದೆಯವರಿಗೂ ಕೊರಗಜ್ಜನಿಗೂ ಕೆಲಸದ ವಿಚಾರದಲ್ಲಿ ಯಾವಾಗಲು ತಕರಾರು ಅವನು ಮಾಡಿದ್ದು ಇವರಿಗಾಗುತ್ತಿರಲಿಲ್ಲ ಇವರು ಹೇಳಿದ್ದು ಅವನಿಗಾಗುತ್ತಿರಲಿಲ್ಲ ಆದರೂ ಇಬ್ಬರಲ್ಲೂ ಆಳು-ಮೇಲೆಂಬುದಿರಲಿಲ್ಲ.ತಂದೆ ನನ್ನ ಮದುವೆಯಾಸೆಯಲ್ಲೆ...... ಅಕಾಲಿಕವಾಗಿ ವಿಧಿವಶವಾದರು ಅದು ನನ್ನ ಕೆಟ್ಟ ದಿನವಾಗಿತ್ತೋ ಅಥವ ತಂದೆಯ ಸಾವಿಗೆ ನನ್ನ ಶ್ರದ್ದಾಂಜಲಿಯಾಗಿತ್ತೋ ಏನೋ ಸಾವಿನ ಸುದ್ದಿ ಬಂದ ಮೇಲೂ ತುಂಬ ಹೊತ್ತು ನಾನು ಶೂಟಿಂಗ್ ಮಾಡಬೇಕಾಗಿತ್ತು,ಜೀವಂತ ಇರೋವಾಗ ಒಂದು ಸರ್ತಿಯ ನನ್ನ ಏಳಿಗೆ ನೋಡುವ ಹಂಬಲ ಅವರದಾಗಿತ್ತು.
ತಂದೆಯವರ ಸಾವಿನಿಂದ ಕೊರಗಜ್ಜ ಕೂಡ ತುಂಬ ನೊಂದಿದ್ದ.......ಅತ್ತಿದ್ದ......ಎಲ್ಲರೆದುರು ನನ್ನ ದಿನ ಯಾವಾಗ ಬರುತ್ತೋ ಎಂದು ಆಕಾಶದತ್ತ ಎರಡೂ ಕೈಗಳನ್ನು ಮೇಲಕ್ಕೆ ಮಾಡಿ ಕಣ್ಣಲ್ಲಿ ನೀರಿಡುತ್ತಿದ್ದ.....ಅವನ ಪರಿಸ್ಥಿತಿ ಕೂಡ ಹಾಗೆ ಇತ್ತು.ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿದ್ದ ಮಗಳು ಮನೆಯಿಂದ ಹೊರಗೆ ಹಾಕಿದ್ದಳು ಸ್ವಂತ ಮನೆಯನ್ನೂ ಮಗಳಿಗೇ ಬಿಟ್ಟು ಕೊಟ್ಟಿದ್ದ.ಜೀವದ ಸಂಗಾತಿ ನಾಗಮ್ಮ ಕೆಲ ವರುಶಗಳ ಹಿಂದೆಯೇ ತೀರಿಕೊಂಡಿದ್ದಳು.ಆದರೂ ಅವನಲ್ಲಿ ಸ್ವಾಭಿಮಾನ ಕೊನೆಯುಸಿರ ತನಕ ಮನೆ ಮಾಡಿ ಕೆಟ್ಟ ಸಾವಾನ್ನು ತಂದುಕೊಟ್ಟಿತು.
ಕೊರಗಜ್ಜ ಮಗಳಿಂದ ಹೊರ ಹಾಕಿಸಿಕೊಂಡು ಮುಪ್ಪಿನಲ್ಲು ಮತ್ತೆ ಸ್ವಂತ ಮನೆ ಮಾಡಿದ ಅವನೆ ಅಡುಗೆ ಮಾಡುತ್ತಿದ್ದ ಕಣ್ಣು ಸರಿಯಾಗಿ ಸಹಕರಿಸುತ್ತಿರಲಿಲ್ಲ ಮಂದವಾಗಿತ್ತು ಸಾಯಂಕಾಲದ ಹೊತ್ತು ತಪ್ಪದೆ ಕುಡಿಯುತ್ತಿದ್ದ ಕರಿಯನ ಮನೆ ಕಲಿ(ಹೆಂಡ)ಕುಡಿಯುವುದಕ್ಕೂ ಸಾಧ್ಯವಿಲ್ಲ ಅನ್ನುವ ಹಾಗಾಯ್ತು. ಆದರೂ ಅವನ ಕೆಚ್ಚು ನಿಂತಿರಲಿಲ್ಲ.ಪಟೇಲರ ಗರಡಿಯಲ್ಲಿರುವಾಗ ತಿಂದು ಕೊಬ್ಬಿದ್ದ ದೇಹದಲ್ಲಿ ಚರ್ಮ ಸುಕ್ಕಾಗಿದ್ದರೂ ಕಟ್ಸ್ ಎದ್ದೆದ್ದು ಕಾಣುತ್ತಿತ್ತು.ಅಂಥಾ ಕೊರಗಜ್ಜನ ಬಾಯಲ್ಲಿ ಒಂದು ಮಾತು ಯಾವಾಗಲೂ ಬರುತ್ತಿತ್ತು ನಾನು ಸಧ್ಯಕ್ಕೆ ಸಾಯಲ್ಲ ಎಲ್ಲರ ಚಂದ ನೋಡಾಯ್ತು ಇನ್ನೊಬ್ಬರದು ಬಾಕಿ ಇದೆ........ಅದು ನನ್ನ ಮದುವೆಯಾಗಿತ್ತು.ಕೊರಗಜ್ಜನ ಈ ಆಸೆಗೆ ಕಾರಣವೂ ಇತ್ತು ನಾನು ಚಿಕ್ಕೋನಿದ್ದಾಗ ಕೊರಗಜ್ಜನ ಸಂಸಾರ ನಮ್ಮ ಕೊಟ್ಯ(ದಾಸ್ತಾನು ಮನೆ)ದಲ್ಲಿತ್ತು.ನನ್ನನ್ನು ನಾಗಮ್ಮ ಕೊಡೋ ಬೆಲ್ಲ ಬಾಯಿಗಿರಿಸಿ ಹೆಗಲ ಮೇಲೆ ಕುಳ್ಳಿರಿಸಿ ಇಡೀ ಗದ್ದೆ ಸುತ್ತಾಡಿಸುತ್ತಿದ್ದ.ಆ ಹಕ್ಕಿನಿಂದ ಅವನು ಹೇಳುತ್ತಿದ್ದ ನಾನು ಎತ್ತಿ ಆಡಿಸಿದ ಕುರ್ಲೆ (ಚಿಕ್ಕ ಮರಿ)ಅದು ಎಂದು.
ಕೊರಗಜ್ಜ ನಮ್ಮ ಮನೆಯ ನಗುವಲ್ಲೂ ಅಳುವಲ್ಲೂ ಸಮಭಾಗಿಯಾಗಿದ್ದ. ನಮ್ಮ ಮನೆಯ ಎಲ್ಲ ಭೂತಗಳೂ ಅವನಿಗೆ ಆತ್ಮೀಯರಾಗಿದ್ದರು ಯಾಕಂದ್ರೆ ಆ ಭೂತಗಳಿಗೆ ಅಗೆಲ್(ಕೋಳಿ ಹರಕೆಯ ಅಡುಗೆ)ಮಾಡಿ ಬಡಿಸುವವನು ಅವನೇ ಆಗಿದ್ದ.ರಾತ್ರಿ ಹೊತ್ತು ಕಣ್ಣು ಕಾಣಿಸದ ಹಾಗಾಗುವವರೆಗು.ಆ ನಂತರವೆ ಆ ಪಟ್ಟ ಇನ್ನೊಬ್ಬ ಕೆಲಸದಾಳು ಚಂದ್ರಯಾಚಾರಿಗೆ ಸಿಕ್ಕಿದ್ದು.
ಅಂತೂ ಪಪ್ಪನಿಗೆ ನಿರಾಸೆ ಮಾಡಿದ್ದ ನನ್ನ ಮದುವೆ ಅವರ ಸಾವಿನ ನಂತರ ಗೊತ್ತಾಯಿತು.ಕೊರಗಜ್ಜನಿಗೆ ಹೊಸ ಬಟ್ಟೆ ಕೊಡಿಸಿದ್ದೆ .ಮದುವೆಯ ದಿನ ಮಂಟಪದ ಎದುರು ಅದ್ಯಾಕೆ ಗಂಟೆಗಳ ಕಾಲ ನಿಂತಲ್ಲೆ ನಿಂತಿದ್ದನೋ..........
ನಾನು ಕೊಡಿಸಿದ್ದ ಹೊಸ ಬಟ್ಟೆ ಹಾಕಿಕೊಂಡು ಹಗಲು ಹೊತ್ತು ಒಂದೆರಡು ದಿನ ಊರು ತುಂಬ ತಿರುಗಾಡಿದ್ದ .ಅಲ್ಲಲ್ಲಿ ನನ್ನ ಹೆಸರು ಹೇಳುತ್ತಿದ್ದನಂತೆ.......ಕೊರಗಜ್ಜ ನನ್ನ ಮದುವೆಯ ದಿನ ಅದ್ಯಾಕೆ ತುಂಬಾ ಹೊತ್ತು ನಿಂತಲ್ಲೆ ನಿಂತು ನೋಡುತ್ತಿದ್ದ ಅನ್ನುವುದಕ್ಕೆ ನನ್ನ ಮದುವೆಯ ಎರಡನೇ ದಿನ ಉತ್ತರ ಸಿಕ್ಕಿತ್ತು......ಕೊರಗಜ್ಜ ಕೆಟ್ಟ ನಿರ್ಧಾರ ಮಾಡಿದ್ದ ಕೊನೆಗಾಲದಲ್ಲಿ ಇನ್ನೊಬ್ಬರ ಹಂಗಲ್ಲಿ ಬದುಕಲಾರೆ ಅನ್ನುತ್ತಿದ್ದ ಮಾತು ನಿಜ ಮಾಡಿದ್ದ ಇನ್ನು ಮುಂದಕ್ಕೆ ಈ ಮುಪ್ಪು ನನ್ನನ್ನು ಕೆಟ್ಟದಾಗಿ ಕಾಡುತ್ತೆ ಅನ್ನುವ ಸತ್ಯ ಗೊತ್ತಿದ್ದ ಅಜ್ಜ ಅದೆಶ್ಟು ಶಕ್ತಿ ಸೇರಿಸಿ ತನ್ನ ಪ್ರೀತಿಯ ಸೂರಿನ ಅಟ್ಟ ಹತ್ತಿದ್ದನೋ......ಅಜ್ಜ ಯಾರ ಹಂಗಿಲ್ಲದೆ ಕೆಟ್ಟದಾಗಿ ನೇತಾಡುತ್ತಿದ್ದ......
ನ್ಯಾಯವೆ........ ಅನ್ಯಾಯವೆ........

ಕಾಡುವ ನೆನಪುಗಳು

ಮುಂಜಾವದಲ್ಲಿ ವಾಕಿಂಗ್ ಹೋಗೋದು ಆರೋಗ್ಯಕ್ಕೆ ಒಳ್ಳೆಯದು ಅದಕ್ಕೆ ಹಕ್ಕಿಗಳು ಎಚ್ಚರವಾಗುವ ಹೊತ್ತಿಗೆ ಪಾರ್ಕುಗಳಲ್ಲಿ ತರಹೇವಾರಿ ಸ್ಟೈಲ್ಲುಗಳಲ್ಲಿ ವಾಕಿಂಗ್ ಶುರುವಾಗಿತ್ತೆ.ಇನ್ನುಕೆಲವರು ಪಾರ್ಕು ಒಳಗೆ ಕಾಲೆ ಇಡೋದಿಲ್ಲ. ರೋಡಲ್ಲೆ ವಾಕಿಂಗ್.....?ಸದಾ ಅವರಿಗೆ ನಾಯಿ ಭಯ ಅನ್ನುವಂತೆ ಕೈಯಲ್ಲಿ ಕೋಲು ಹಿಡಿದಿರುತ್ತಾರೆ...ಹಾಗಂತ ನಾವಂದ್ಕೊಂಡ್ರೆ ತಪ್ಪಾಗುತ್ತೆ.ಇವರುಕಳ್ಳರು....ಸ್ಟಾಂಡರ್ಡ್ ಕಳ್ಳರು...ಸುವಾಸನೆಯ ಬೀರುವ ಹೂಗಳ್ಳರು.
ಪಕ್ಕದ ಕಂಪೌಂಡಿನಿಂದ ಹೂಗಿಡ ಬಗ್ಗಿಸಲು ಹಿಡಿದಿರುತ್ತಾರೆ ಬೆತ್ತ (ಎಲ್ಲರೂ ಅಲ್ಲ)ಸ್ವಲ್ಪ ವೇಸ್ಟ್ ಮಾಡಿದರೂ ದೊಡ್ಡ ಲಾಸ್ ಅನ್ನುವ ಬೆಲೆಯುಳ್ಳ ಸೈಟ್ನಲ್ಲಿ ಅಕ್ಕರೆಯಿಂದ ಹೂಗಿಡ ನೆಟ್ಟು ತಿಂಗಳಾನುತಿಂಗಳಿಂದ ಇಲ್ಲದ ಸಮಯದಲ್ಲೂ ಸಮಯ ಮಾಡಿಕೊಂಡು ನೀರು ಗೊಬ್ಬರ ಹಾಕಿ ಬೆಳೆಸಿದ ಪರರ ಕಂಪೌಂಡಿನಿಂದ ಹೂ ಕದಿಯೋದು ಅಂದ್ರೆ ಇವರಿಗೆ ಅದೇನು ಖುಶಿಯೋ.ಪಾಪ ಮನೆಯೊಡೆಯರು ಒಂದೈದು ನಿಮಿಶ ಹೆಚ್ಚು ನಿದ್ದೆ ಮಾಡಿದರು ತಮ್ಮ ಗಿಡದಲ್ಲಿ ಹೂವಿರೋದಿಲ್ಲ.ಕದ್ದೊಯ್ದವನಿಗೆ ಬೆಳೆಸಿದವರ ಭಾವನೆಗಳು ಅರ್ಥ ಆಗೋದಿಲ್ಲ ಅವರ ಮಮಕಾರ ಹೇಗಿತ್ತು ಅನ್ನೋದು ತಿಳಿಯೋದಿಲ್ಲ .ಇವರಿಗೆ ಬೆಳೆಸಿ ಗೊತ್ತಿಲ್ಲ ....ಆದರೂ ಇವರು ದೇವರಿಗೆ ಪ್ರಿಯರು ಕದ್ದ ಹೂವನ್ನು ಹೆಂಡತಿಯ ಕೈಗಿಟ್ಟೊ ಅಥವ ತಾವೆ ದೇವರ ಅಡಿಯಿಂದ ಮುಡಿಯವರೆಗೆ ಜೋಡಿಸಿ ,ಕೈಮುಗಿದಿರುತ್ತಾರೆ ಅಡ್ಡ ಬಿದ್ದಿರುತ್ತಾರೆ. ಯಾರದೋ ಶ್ರಮ ಯಾರಿಗೋ ವರ.
ತುಪ್ಪ ತಿನ್ನಿಸಿ ಹಾಲು ಕುಡಿಸಿ ಮೈಕೈ ತುಂಬುವಂತೆ ಬೆಳೆಸಿ ಸಾಕಿದ ಮಗಳನ್ನು ಅಪರಾತ್ರಿ ಅಪಹರಿಸಿದರೆ ಹೇಗಾದೀತು ಹೇಳಿ ಕಳ್ಳರೆ. ನೀವು ಭಕ್ತಿಯ ನೆಪ ಹೇಳಬಹುದು ಪ್ರೇಮಿ ಪ್ರೀತಿಯ ನೆಪ ಹೇಳಬಹುದು .ಆದರು ಕಳಕೊಂಡವರ ಹ್ರದಯ ಮತ್ತು ಕಂಪೌಡ್ ಕಾಲಿ ಕಾಲಿ ಅಲ್ಲವೆ ....ಬರಿಯ ನೆನಪುಗಳ ನೋವ ಭಾವಗಳು......

ಹೇಗಿರುತ್ತಿದ್ದರು

ತಾಯಿ ದೇಹದಿಂದ ಬೇರ್ಪಟ್ಟು ಜನನ ಆದ ಗಳಿಗೆಯಿಂದ ಆ ಮಗುವಿನ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಡುತ್ತಾ ಹೋಗುತ್ತೆ ಅಪ್ಪ ಅಮ್ಮಂಗೆ ಒಡಹುಟ್ಟಿದವರಿಗೆ ಮನೆಯ ಇತರರಿಗೆ......ಯಾವಾಗ ಆ ಮಗುವಿನ ದೇಹಗಟ್ಟಿಯಾಗುತ್ತಾ ಹೋಗುತ್ತಾ ಅವತ್ತಿನಿಂದ ಅದು ತನ್ನ ಬಗ್ಗೆ ಕನಸು ಕಾಣೋದಕ್ಕೆ ಶುರು ಮಾಡುತ್ತೆ.
ಕನಸು ಅದೊಂದು ಅದ್ಬುತ ಪ್ರಪಂಚ ಯಾವುದೇ ಟಿಕೆಟ್ಟಿಲ್ಲದೆ ಯಾರದೇ ಹಂಗಿಲ್ಲದೆ ಕೇಳದ್ದನ್ನು ನೋಡದ್ದನ್ನು ಹೀಗಾ ಎಂದು ಯೋಚಿಸಲೂ ಆಗದ್ದನ್ನು ವಿಚಿತ್ರಾವಿಚಿತ್ರ ಜಾಗಗಳಿಗೆ ಕರೆದೊಯ್ದು ತೊರಿಸುತ್ತೆ.ರಸಿಕನ ಎದುರು ಅತಿಸುಂದರಿ ಅರ್ಧ ತೋರಿಸಿ ಮಂಡಿಗೆ ಬೆಲ್ಲ ತಿನ್ನಿಸಿದ ಹಾಗೆ,ಎಚ್ಚರ ಆದ ನಂತರ ಕೈಗೆ ಸಿಗದ ಸುಂದರಿ ತೋರಿಸಿದ ಆ ಕನಸಿಗೆ ಅದೆಶ್ಟು ಶಾಪವೋ.ಆದರೂ ಕೆಲವೊಂದು ನಿಜವಾಗುವ ಕನಸುಗಳಿಗೆ ಅದೆಶ್ಟು ಮರ್ಯಾದೆ ಕದ್ದು ಮಾಡಿದ ಮಜಾದಶ್ಟು ಕುಶಿ ಕೆಲವರು ಹೇಳ್ಕೋತಾರೆ ಇನ್ನು ಕೆಲವರು ಅದುಮಿಟ್ಕೋತಾರೆ.
ಏನೇ ಇದ್ರು ಎಲ್ಲ ಕನಸುಗಳನ್ನು ಕಾಣೋದಕ್ಕೆ ಮೂಲ ಅಪ್ಪಾಮ್ಮ.ಅವರ ಮಿಲನದಿಂದ ಹುಟ್ಟಿದ್ದಕ್ಕೆ ಅವರ ಕಾಳಜಿಯಲ್ಲಿ ಬೆಳೆದು ಬಲಿತಿದ್ದಕ್ಕೆ ಎಲ್ಲ ತೆರನಾದ ಕನಸುಗಳ ಪ್ಯಾಕೇಜ್ ಲಭ್ಯ ಇದು ಎಲ್ಲರಿಗು ಮಿದುಳಿನ ಒಂದು ಮೂಲೆಯಲ್ಲಿ ಜಾಗ ಮಾಡಿಕೊಂಡು ಕುಳಿತಿರುವ ಸೆನ್ಸ್ ಯಾವಾಗ್ಲು ಹೇಳ್ತ ಇರುತ್ತೆ ಆದ್ರು ಬ್ಯುಸಿಯ ಮಧ್ಯೆ ಮರಿಯುತ್ತೆ.
ಹೀಗೆ ಎಲ್ಲ ರೀತಿಯ ಕನಸುಗಳನ್ನು ಕಾಣುತ್ತಾ ಇನ್ನೊಂದಶ್ಟು ಕನಸು ಕಾಣುವ ಜೀವಗಳಿಗೆ ಜನ್ಮಕೊಟ್ಟು ಜೀವನ ಸಾರ್ಥಕ.....?ಮಾಡಿಕೊಂಡವರು...ಕೆಲವರು ಅದೆಶ್ಟೋ ಬೆತ್ತಲೆ ದೇಹಗಳನ್ನು ನೋಡಿರುತ್ತಾರೆ ರಸಿಕತನದ ಅದೆಶ್ಟೋ ವರ್ಶಗಳನ್ನು ಕೆಲವೇ ವರ್ಶಗಳಲ್ಲಿ ನೋಡಿರುತ್ತಾರೆ ಸಂಬಂದವೇ ಇಲ್ಲದ ಜೀವ ಅತಿಯಾಗಿ ಮತ್ತೇರಿಸಿ ವಾಂತಿ ಮಾಡಿದಾಗ ಕೆಳಗೆ ಗಲೀಜು ಮಾಡಿದಾಗ ಬಾಚುತ್ತಾರೆ ತೊಳೆಯುತ್ತಾರೆ ಎಲ್ಲವೂ ಕಾಮದ ಹೆಸರಲ್ಲಿ ಡೋಂಟ್ ವರಿ ಅನ್ನುವ ನಾಳಿನ ಮತ್ತೆಯ ಬೇಡಿಕೆಯಲ್ಲಿ ಗೌಣ, ಹೇಸಿಗೆ ಇಲ್ಲ ವಾಸನೆ ಇಲ್ಲ..... ವಯಸ್ಸು ಮಾಗುತ್ತ ನೆನಪೂ ಇಲ್ಲ.ಮನೆಯಲ್ಲಿ ಸಾವಿರ ಸುಳ್ಳು ಹೇಳಿ ನಂಬಿಸಿದ ಸಂಸಾರದ ಜಂಜಾಟದ ಮಧ್ಯೆ ಮಾಗಿ ಹಣ್ಣುಹಣ್ಣಾದ ಹೆತ್ತವರ ಗೊಡವೆಯೆ ಮರ್ತಿರುತ್ತೆ.ಈ ಮರೆವಿನ ಸಂದುಗೊಂದುಗಳ ಮಧ್ಯೆ ಆ ಮುದಿ ಜೀವಗಳನ್ನು ಅಂತ್ಯಕಾಲದ ಗೆದ್ದಲು ಹಿಡಿದಿರುತ್ತದೆ.ಅವರು ಅಪಥ್ಯವಾಗುತ್ತಾರೆ ಅವರುಕನಸು ಕೊಟ್ಟವರಿಗೆ ಅವರ ಕೂಗು ಕೇಳಿಸುವುದಿಲ್ಲ ಜಾಸ್ತಿ ಕೂಗಿದರೆ ಮನೆಮೂಲೆಯ ಕೊಣೆಗೆ ದೂಡುತ್ತಾರೆ ಮನೆಗೆ ಬರುವವರ ಸಂಪರ್ಕ ತಪ್ಪಿಸುತ್ತಾರೆ ಏನೇನೋ ನೆಪ ಹೇಳಿ ಇಲ್ಲ ಆಶ್ರಮ ಸೇರಿಸುತ್ತಾರೆ.
ಈಗ ಮುಲೆ ಸೇರಿದವರಿಗೆ ಯಾವುದೇ ಕಾಮನೆಗಳಿಲ್ಲದಿದ್ದರು ಕಾಮ ಇರುವವರಿಗಿಂತ ಹೆಚ್ಚಿನ ಭಾವನೆಗಳು ಹುಟ್ಟುತ್ತೆ ಎಲ್ಲರನ್ನು ಹತ್ತಿರ ಬಯಸುತ್ತೆ ತನ್ನನ್ನು ಕೊಂಡಾಡುವ ಮಾತುಗಳನ್ನು ಸವಿಯುತ್ತೆ ಬಾಯಿ ಚಪ್ಪರಿಸಲು ಹಲವು ಕಾಯಿಲೆಗಳು ತಡೆದಿದ್ದರು ಬಂದವರ ಬೆನ್ನು ಚಪ್ಪರಿಸಲು ತವಕಿಸುತ್ತೆ ಸಾವ ಜಾರುಬಂಡಿಯ ತುದಿಯಲ್ಲಿರುವುದು ಗೊತ್ತಿದ್ದರು ಮತ್ತೆ ಕನಸುಗಳ ಮೆಲುಕು ಹಾಕುತ್ತೆ ಕಾಣೊಆಸೆ ತೋರಿಸುತ್ತೆ ಆದರೆ ನೆನಪುಗಳ ಕೊರತೆ....ಅಲ್ಲೂ ಗೆದ್ದಲುಗಳ ಸದ್ದು......
ಅಂತೂ ಅದೆಶ್ಟೋ ವರ್ಶಗಳ ಕೊಂಡಿ ಕಳಚಿ ಟಾಟಾ ಹೇಳಿದಾಗ ಪ್ರೀತಿಯಿಂದ ಬಂದವರ ಇನ್ನೊಬ್ಬರ ಬಾಯಿಗೆ ಸಿಗೋದು ಬೇಡ ಎಂದು ಬಂದವರ ಜಾತ್ರೆ ನಡೆಯುತ್ತೆ.ಸಂತೆಯಲ್ಲಿ ಹಲವಾರು ತರಹದ ಅಂಗಡಿಗಳಂತೆ ಇಲ್ಲೂ ಸತ್ತವರ ಕುರಿತಾಗಿ ಚರ್ಚೆಯ ಅಂಗಡಿಗಳು ,ಸವಿಯುವವರು ಜಗಿಯುವವರು ಉಗುಳುವವರು ಅತಿಯಾಗಿ ತೇಗಿಸಿಕೊಳ್ಳುವವರು ಅಂತೂ ಅಲ್ಲಿ ನವರಸದ ಭರ್ಜರಿ ಊಟ....ಇಉಗಳ ಮಧ್ಯೆ ಆತ್ಮವಿಲ್ಲದ ದೇಹಕ್ಕೆ ಸ್ನಾನ ....ನಂತರ ಭರ್ಜರಿ ಡ್ರೆಸ್ಸು.....ನಂತರ ಜೀವತವಾಗಿರುವಾಗ ಕುಡಿಸಿರಲಾರದಶ್ಟು ಶುದ್ದ ತೀರ್ಥ ಮಿಶ್ರಿತ ನೀರು ಕುಡಿಸುವವರೆಗೆ.....ನಂತರ ಚಟ್ಟಕ್ಕೇರಿಸಿ ಕಾಟದಲ್ಲಿಟ್ಟು ಕೊಳ್ಳಿ ಇಡುವವರೆಗೆ ಕೇಳಿಸುವ ಅಳುವಿನ ಸದ್ದು ತನಗರಿವಿಲ್ಲದೆಯೇ ಯವುದೋ ದಾರಿ ಹಿಡಿಯುತ್ತೆ.......ಬೆಂಕಿಯೇರಿಸಿಕೊಂಡ ಜೀವ ಒಂದೊಂದೇ ಕನಸುಗಳನ್ನು ಕಳಚುಕೊಳ್ಳುವಂತೆ ತನ್ನ ಭಾಗಗಳನ್ನು ಅರ್ಪಿಸಿಕೊಳ್ಳುತ್ತಾ ಇನ್ನೂ ತನ್ನಿರುವು ಸ್ವಲ್ಪ ಇದೆ ಅಂದುಕೊಳ್ಳುತ್ತಿರುವಾಗಲೆ ಅಲ್ಲಿಂದ ದೂರ ಸರಿದಿರುವ ತನ್ನವರು ಬೆಚ್ಚನೆ ಚಹಾದಿಂದ ಮನಸು ಸರಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿ ನಂತರ ಯಾರು ಅನ್ನುವ ಹೊಗೆಯನ್ನು ಎತ್ತರಕ್ಕೆ ಕಳಿಸುತ್ತ ಸ್ವಾಗತ ಕೋರುತ್ತೆ.
ಇಲ್ಲೊಂದು ಪ್ರಶ್ನೆ ......ದೇಹ ಉರಿದಾರುತ್ತಿರುವಂತೆ ಆತ್ಮೀಯರ ನಿಲ್ಲುವಅಳು ಮತ್ತೆ ನಿಶ್ಯಬ್ಧದಿಂದ ಚಲನೆಗೆ ಶುರುವಿಟ್ಟುಕೊಳ್ಳುವ ಹಸಿವು ಕಾಮನೆಗಳು ಜನರನ್ನುಸಾವಿನ ಭಯದಿಂದ ದೂರವಿಟ್ಟು ದುರಾಸೆಯನ್ನು ಬೆಳೆಸುವುದೇತಕ್ಕೆ ದ್ವೇಶದ ಕಿಚ್ಚು ಹಚ್ಚುವುದೇತಕ್ಕೆ........
ಒಂದು ವೇಳೆ ಮೋಡ ಕೆಚ್ಚಲು ಕಟ್ಟದಿದ್ದರೆ ಕಡಲುಮಿಸುಕಾಡದೆ ಕುಳಿತರೆ ಭೂಮಿಮೊಳಳಕೆಯೊಡೆಯದಿದ್ದರೆ.......
ಹೀಗೆ ಬೆದರಿಕೆಯಿದ್ದಿದ್ದರೆ ಜನ ಹೀಗಿರುತ್ತಿದ್ದರೆ .....