Sunday, July 13, 2008

ಸಾವು ಕಿವಿಯಲ್ಲಿ ಉಸುರುತ್ತದಾ

ಇಚ್ಚೆ ಕೆಲವರ ಸಾವಿನ ದಿನವನ್ನು ನಿರ್ಧರಿಸುತ್ತ.......?

ನನ್ನ ಅಜ್ಜನ ಹೆಸರು ರಾಮಣ್ಣ ಆದರೆ ಅವರು ಹೆಸರು ಬರೆಯುತ್ತಿದ್ದುದು ರಾಮಂಣ ಅದ್ಯಾಕೊ ಗೊತ್ತಿಲ್ಲ ಅವರ ಪ್ರಕಾರ ಅದುವೆ ಸರಿಯಂತೆ.ಅವರದು ವಿಚಿತ್ರ ಸ್ವಭಾವ. ಯಾರನ್ನು ಸುಲಭವಾಗಿ ನಂಬುವವರಲ್ಲ ಲೆಕ್ಕಾಚಾರದಲ್ಲೂ ಪಕ್ಕಾ.ಬೆಳಿಗ್ಗೆ ಎದ್ದು ಗದ್ದೆಕಡೆ ಹೋದ್ರೆ ಪುಣಿ ಅಂದ್ರೆ ಗದ್ದೆಯ ಬದಿಯ ಎತ್ತರದ ಜಾಗದಲ್ಲಿರುವ ತೆಂಗಿನ ಮರದಲ್ಲಿ ಎಳನೀರು ಎಶ್ಟಿದೆ ತೆಂಗಿನಕಾಯಿ ಎಶ್ಟಿದೆ ಎಂಬುದನ್ನ ಕೆಳಗೆ ನಿಂತೆ ಲೆಕ್ಕ ಹಾಕಬಲ್ಲಂತಹವರು ಒಂದು ಕಮ್ಮಿ ಆಗಿದ್ದರು ರಂಪ ಮಾಡೋರು ಯಾರ್ಯಾರ್ ಮೇಲೋ ಅನುಮಾನ ಪಡೋರು. ಮಳೆಗಾಲದಲ್ಲಿ ಜೋರಾಗಿ ಗಾಳಿ ಮಿಂಚು ಸಿಡಿಲು ಬಂದರೆ ಸಾಕು ರಾಮ.....ರಾಮ ಎಂಬ ಜಪ ಶುರು ಮಾಡುತ್ತಿದ್ದರು ಅವರ ಆ ಭಂಗಿ ನೋಡಿಯೆ ನಮಗೆ ಇವತ್ತು ಪ್ರಳಯ ಆಗಿ ಬಿಡುತ್ತೇನೋ ಅನ್ನುವ ಭಯ ಬರುತ್ತಿತ್ತು.ಅದಕ್ಕಿಂತಲೂ ನಮಗೆ ಇನ್ನೊಂದು ಭಯ ಕಾಡುತ್ತಿದ್ದುದು ಚಿಕ್ಕಂದಿನಲ್ಲಿ ನಮ್ಮ ತಲೆಗೂದಲು ಬೆಳೆದಾಗ ಆಗುತ್ತಿತ್ತು. ಬಂಡಾರಿ ಶಾಪಿಗೆ ಕರ್ಕೊಂಡ್ ಹೋಗಿ ಇನ್ನು ಐದು ತಿಂಗಳು ಅಂದ್ರೆ ಸಾಕಿತ್ತು ಬಂಡರಿ ಕೈಯಲ್ಲಾಡಿಸುವ ಮೆಶಿನ್ನಿನಿಂದ ಆರು ತಿಂಗಳು ಆಕಡೆ ತಲೆ ಹಾಕದಂತೆ ಮಾಡುತ್ತಿದ್ದ.ಅಜ್ಜನಿಗೆ ನಮ್ಮ ತಲೆ ನೇವರಿಸಿದಾಗ ಏನೋ ನೆಮ್ಮದಿ ನಮಗೋ ಶಾಲೆಯಲ್ಲಿ ಮಿಕ್ಕ ಹುಡುಗರು ಮಾಡುವ ಕೀಟಲೆ ನೆನೆದು ಅಳು ಬರುತ್ತಿತ್ತು.

ಅಜ್ಜನಿಗೆ ಅತಿ ಬಿಸಿಯಾದ ನೀರ ಸ್ನಾನ ಅಂದ್ರೆ ಬಲು ಪ್ರೀತಿ. ನಮ್ಮ ಕೈಯಿಂದ ಮುಟ್ಟಲು ಆಗದಂತ ಬಿಸಿ ಹೇಗೆ ಮೈಮೇಲೆ ಸುರಿದುಕೊಳ್ಳುತ್ತಿದ್ದರೋ......ಬೇಸಿಗೆಯ ರಣ ಬಿಸಿಲಲ್ಲು ನೀರ ಹಂಡೆಯ ಎದುರು ಕುಳಿತು ಚಳಿ ಕಾಯಿಸುತ್ತಿದ್ದರು.

ನನ್ನ ಮೇಲೆ ಅವರಿಗೆ ಮನೆಯ ಮಿಕ್ಕವರಿಗಿಂತ ವಿಶ್ವಾಸ ಜಾಸ್ತಿ ಇತ್ತು ಆದ ಕಾರಣ ಅವರಬಳಿ ಇದ್ದ ದುಡ್ಡುಕಾಸಿನ ಸಂಪೂರ್ಣ ವಿಚಾರ ನಂಗೆ ತಿಳಿದಿತ್ತು ಮನೆಯಲ್ಲಿ ಬೇರೆಯವರಿಗೆ ದುಡ್ಡಿನ ಅವಶ್ಯಕತೆ ಇದ್ದರೆ ಅದು ನನ್ನ ಮುಖಾಂತರ ಡೀಲ್ ಆಗ್ತಿತ್ತು.ಅವರ ಕಬ್ಬಿಣದ ಪೆಟ್ಟಿಗೆಯ ತುಂಬ ಬೇರೆ ಬೇರೆ ಸೈಜಿನ ಪುಸ್ತಕಗಳಿರುತ್ತಿತ್ತು ಅದಕ್ಕೆ ತಕ್ಕಂತೆ ಮೊತ್ತಾದಾರಿತ ನೋಟುಗಳು ಅವುಗಳ ಮಧ್ಯೆ ಮನೆ ಮಾಡುತ್ತಿದ್ದವು.

ಡಿಗ್ರಿ ಎಂಬ ಕಾಟಾಚಾರದ ವರುಶಗಳನ್ನು ಮುಗಿಸಿ ಊರು ಬಿಟ್ಟ ಮೇಲೆ ಹಲವಾರು ಕಾರಣಗಳಿಂದ ಒಂದೆರಡು ವರ್ಶ ಮನೆ ಕಡೆ ತಲೆ ಹಾಕ್ಲಿಲ್ಲ ಆ ಸಮಯದಲ್ಲಿ ಅಜ್ಜನಿಗೂ ಆರೋಗ್ಯ ತೀರ ಹದಗೆಟ್ಟಿತ್ತು ಇನ್ನೊಬ್ಬರ ಮುಖಾಂತರ ವಿಶಯ ತಿಳಿದು ಊರಿಗೆ ಹೋದಾಗ ಅಜ್ಜ ಸದ್ದಿಲ್ಲದೆ ಮಲಗಿದ್ದರು ತೀರ ನಿತ್ರಾಣವಾಗಿದ್ದರು ಅಮ್ಮ ಅಜ್ಜಿ ನಿನ್ನನ್ನ ನೋಡ್ಲೇ ಬೇಕೆಂದು ತುಂಬಾನೆ ಹಟ ಹಿಡಿದಿದ್ರು ಅನ್ನುವ ಮಾತು ಅವರ ಕಿವಿಗೆ ಬಿತ್ತೇನೊ,ಏಳೆಂಟು ದಿನಗಳಿಂದ ಮಲಗಿದವರು ಎದ್ದು ಕೂತರು ನನ್ನ ಪಕ್ಕ ಕೂರಿಸಿ ಕ್ಶೇಮ ಸಮಾಚಾರ ವಿಚಾರಿಸಿದರು ನನಗೆ ಕುಡಿಯೋದಕ್ಕೆ ಚಾ ಕೊಡಿ ಅಂದರು.

ನನ್ನ ಚಾ ಕುಡಿದಾಯಿತು ಅಜ್ಜ ಗೆಲುವಾದರು ಎಲ್ಲರು ಅದನ್ನು ಗಮನಿಸಿ ಪ್ರೀತಿದ ಪುಲ್ಲಿನ್ ತೂಯಿಕೂಡ್ಲೆ ಉಸಾರ್ ಆಯೆರ್(ಪ್ರೀತಿಯ ಮೊಮ್ಮಗನನ್ನು ನೋಡಿ ಸರಿ ಹೋದ್ರು)ಅಂದ್ರು. ಅಜ್ಜ ನನ್ನನ್ನು ಮತ್ತೆ ಹತ್ತಿರ ಕರೆದು ಅಜ್ಜಿಯನ್ನೂ ಕರೆದು ಏನೋ ಸನ್ನೆ ಮಾಡಿದ್ದನ್ನ ಅವರು ಅರ್ಥ ಮಾಡಿಕೊಂಡು ಒಳಗಿನ ಕೋಣೆಯಿಂದ ಅವರ ಪೆಟ್ಟಿಗೆ ತೆರೆದು ನೂರರ ಒಂದು ನೋಟು ತಂದು ಅಜ್ಜನ ಕೈಗಿಟ್ಟರು.ಅಜ್ಜನಿಗೆ ಅದೇನೊ ಖುಶಿ ನನ್ನ ತಲೆ ನೇವರಿಸಿ ಬೆನ್ನು ತೀಡಿದವರೆ ಆ ನೂರರ ನೋಟನ್ನು ನನ್ನ ಕೈಗಿಟ್ಟರು.

ಇದೆಲ್ಲವು ನಡೆಯುವುದಕ್ಕೆ ಮುನ್ನ ತೀರ ಹುಶಾರು ತಪ್ಪಿದಾಗ ಎಲ್ಲಾ ಆತ್ಮೀಯರನ್ನ ಬರಹೇಳಿಸಿ ನಂದಿನ್ನು ಮುಗೀತು ಅಂದಿದ್ರಂತೆ ಹಾಗೆ ಮಲಗಿದವರಿಗೆ ಸಂಬದಿಕರೆಲ್ಲ ಅವರ ಬೇಡಿಕೆಯಂತೆ ಎರಡೆರಡು ಸಲ ಬಂದುಹೋಗಿ ನೀರು ಬಿಟ್ಟಿದ್ದು ಆಗಿತ್ತಂತೆ......ಇದು ಮಿಕ್ಕವರಿಗೆ ಒಂದು ತಮಾಶೆಯನ್ನಿಸಿದಾಗ ಇನ್ನೊಬ್ಬ ಬಾಕಿ ಇದ್ದಾನೆ ಅವ ಬರದೆ ನನ್ನ ಪ್ರಾಣ ಹೋಗೋದಿಲ್ಲ ಅಂದಿದ್ರಂತೆ.......ನಾನೀಗ ಅಜ್ಜನ ಪಕ್ಕದಲ್ಲಿದ್ದೇನೆ ಅಜ್ಜನಿಗೆ ಕುಶಿಯಾಗಿದೆ ಹರಸಿಯಾಗಿದೆ, ಅವರೂ ಸ್ವಲ್ಪ ಆಹಾರ ತಗೊಂಡಿದ್ದೂ ಆಯಿತು ಗೊರಗೊರ ಮಾತು ಅವ್ಯಾವಹತವಾಗಿ ಬರ್ತಾನೆ ಇತ್ತು ಸುಸ್ತು ಮಾಡ್ಕೋಬೇಡಿ ಅಂದ ಅಮ್ಮ ಇನ್ನೂ ಕುಳಿತಿದ್ದ ಅಜ್ಜನನ್ನು ಮಲಗಿಸುವ ಸಲುವಾಗಿ ನನಗೆ ಅವರ ಭುಜ ಹಿಡಿಯಲು ಹೇಳಿ ಅವರು ಕಾಲು ಹಿಡಿದುಕೊಂಡರು ಅಮ್ಮನ ಮುಖ ಪಿಚ್ಚಾಯಿತು ಕಾಲಿನಿಂದ ತಣ್ಣಗಿನ ಅಜ್ಜನ ಸಾವು ಮೇಲೇರುತ್ತಿತ್ತು ಅಜ್ಜನ ಮುಖ ನೋಡಿದಾಗ ತನಗೂ ಗೊತ್ತೆಂಬಂತೆ ತಲೆಯಾಡಿಸಿದರು.



ಕೊರಗಜ್ಜ.......

ಆಟದ ಕೊರಗಜ್ಜ ಕತೆಗಾರ ಕೊರಗಜ್ಜ ಮುಂತಾದ ಹೆಸರಲ್ಲಿ ಕರೆಯಲ್ಪಡುತ್ತಿದ್ದ ಕೊರಗ ಒಂದು ಕಾಲದಲ್ಲಿ ನಮ್ಮೊರ ಪಟೇಲರಿಗೆ ಬಾಡಿಗಾರ್ಡ್ ಆಗಿದ್ದವನು.ಊರಿನ ಚರಿತ್ರೆಯ ವರ್ಣರಂಜಿತ ದಿನಗಳನ್ನು ಕೊರಗ ಹೇಳಿದನೆಂದರೆ ಅವತ್ತಿನ ಇಡೀ ದಿನ ಅದಕ್ಕೆಂದೇ ಮೀಸಲು.ಮಾಗಿದ ವಯಸ್ಸಲ್ಲಿ ದುಡಿದರೆ ಜೀವನ ಅನ್ನುವ ರೀತಿಯ ಬದುಕುಕೊರಗಜ್ಜನದು.ಆ ವಯಸ್ಸಲ್ಲು ಈಗಿನ ಯುವಕರಿಗಿಂತ ಚೆನ್ನಾಗಿ ಕೆಲಸ ಮಾಡಿ ಮಧ್ಯಾಹ್ನದ ಬಿಡುವು ಮತ್ತು ಸಾಯಂಕಾಲದ ಹೊತ್ತಲ್ಲಿ ಇಸ್ಪೀಟಾಟದ ಹುಚ್ಚು ವಿಪರೀತವಗಿತ್ತು.ಆಡಲು ಯಾರೂ ಕಂಪನಿ ಸಿಕ್ಕಿಲ್ಲ ಅಂದ್ರೆ ಆಟದ ಕತೆಗಳಿಗೆ ಕೊರತೆಯಿರಲಿಲ್ಲ,ಮಧ್ಯೆಮಧ್ಯೆ ಆಟ ನೋಡಲು ಬಂದಿದ್ದ ಹುಡುಗ ಹುಡುಗಿ ಯಾವ ರೀತಿ ವರ್ತಿಸುತ್ತಿದ್ದರು ಎಶ್ಟು ಹೊತ್ತಿಗೆ ಆಟದಿಂದ ಎದ್ದು ಹೋದ್ರು ಮತ್ತೆ ಎಶ್ಟು ಹೊತ್ತಿಗೆ ಒಳಗೆ ಬಂದ್ರು ಇವನ್ನೂ ಸೇರಿಸಿ ಹೇಳುತ್ತಿದ್ದ.ಈರೀತಿಯ ಅಜ್ಜನ ಕಣ್ಣಿಗೆ ಅದೆಶ್ಟೋ ಜೋಡಿಗಳುತಪ್ಪಿಸಿಕೊಂಡ್ರೆ ಸಾಕು ಅನ್ನುವ ಹಾಗೆ ಭಯ ಪಡುತ್ತಿದ್ದರು ಇಲ್ಲದಿದ್ದಲ್ಲಿ ಮರುದಿನ ಅವರು ಊರ ಕತೆಯಾಗುತ್ತಿದ್ದರು.
ನನ್ನ ತಂದೆಯವರಿಗೂ ಕೊರಗಜ್ಜನಿಗೂ ಕೆಲಸದ ವಿಚಾರದಲ್ಲಿ ಯಾವಾಗಲು ತಕರಾರು ಅವನು ಮಾಡಿದ್ದು ಇವರಿಗಾಗುತ್ತಿರಲಿಲ್ಲ ಇವರು ಹೇಳಿದ್ದು ಅವನಿಗಾಗುತ್ತಿರಲಿಲ್ಲ ಆದರೂ ಇಬ್ಬರಲ್ಲೂ ಆಳು-ಮೇಲೆಂಬುದಿರಲಿಲ್ಲ.ತಂದೆ ನನ್ನ ಮದುವೆಯಾಸೆಯಲ್ಲೆ...... ಅಕಾಲಿಕವಾಗಿ ವಿಧಿವಶವಾದರು ಅದು ನನ್ನ ಕೆಟ್ಟ ದಿನವಾಗಿತ್ತೋ ಅಥವ ತಂದೆಯ ಸಾವಿಗೆ ನನ್ನ ಶ್ರದ್ದಾಂಜಲಿಯಾಗಿತ್ತೋ ಏನೋ ಸಾವಿನ ಸುದ್ದಿ ಬಂದ ಮೇಲೂ ತುಂಬ ಹೊತ್ತು ನಾನು ಶೂಟಿಂಗ್ ಮಾಡಬೇಕಾಗಿತ್ತು,ಜೀವಂತ ಇರೋವಾಗ ಒಂದು ಸರ್ತಿಯ ನನ್ನ ಏಳಿಗೆ ನೋಡುವ ಹಂಬಲ ಅವರದಾಗಿತ್ತು.
ತಂದೆಯವರ ಸಾವಿನಿಂದ ಕೊರಗಜ್ಜ ಕೂಡ ತುಂಬ ನೊಂದಿದ್ದ.......ಅತ್ತಿದ್ದ......ಎಲ್ಲರೆದುರು ನನ್ನ ದಿನ ಯಾವಾಗ ಬರುತ್ತೋ ಎಂದು ಆಕಾಶದತ್ತ ಎರಡೂ ಕೈಗಳನ್ನು ಮೇಲಕ್ಕೆ ಮಾಡಿ ಕಣ್ಣಲ್ಲಿ ನೀರಿಡುತ್ತಿದ್ದ.....ಅವನ ಪರಿಸ್ಥಿತಿ ಕೂಡ ಹಾಗೆ ಇತ್ತು.ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿದ್ದ ಮಗಳು ಮನೆಯಿಂದ ಹೊರಗೆ ಹಾಕಿದ್ದಳು ಸ್ವಂತ ಮನೆಯನ್ನೂ ಮಗಳಿಗೇ ಬಿಟ್ಟು ಕೊಟ್ಟಿದ್ದ.ಜೀವದ ಸಂಗಾತಿ ನಾಗಮ್ಮ ಕೆಲ ವರುಶಗಳ ಹಿಂದೆಯೇ ತೀರಿಕೊಂಡಿದ್ದಳು.ಆದರೂ ಅವನಲ್ಲಿ ಸ್ವಾಭಿಮಾನ ಕೊನೆಯುಸಿರ ತನಕ ಮನೆ ಮಾಡಿ ಕೆಟ್ಟ ಸಾವಾನ್ನು ತಂದುಕೊಟ್ಟಿತು.
ಕೊರಗಜ್ಜ ಮಗಳಿಂದ ಹೊರ ಹಾಕಿಸಿಕೊಂಡು ಮುಪ್ಪಿನಲ್ಲು ಮತ್ತೆ ಸ್ವಂತ ಮನೆ ಮಾಡಿದ ಅವನೆ ಅಡುಗೆ ಮಾಡುತ್ತಿದ್ದ ಕಣ್ಣು ಸರಿಯಾಗಿ ಸಹಕರಿಸುತ್ತಿರಲಿಲ್ಲ ಮಂದವಾಗಿತ್ತು ಸಾಯಂಕಾಲದ ಹೊತ್ತು ತಪ್ಪದೆ ಕುಡಿಯುತ್ತಿದ್ದ ಕರಿಯನ ಮನೆ ಕಲಿ(ಹೆಂಡ)ಕುಡಿಯುವುದಕ್ಕೂ ಸಾಧ್ಯವಿಲ್ಲ ಅನ್ನುವ ಹಾಗಾಯ್ತು. ಆದರೂ ಅವನ ಕೆಚ್ಚು ನಿಂತಿರಲಿಲ್ಲ.ಪಟೇಲರ ಗರಡಿಯಲ್ಲಿರುವಾಗ ತಿಂದು ಕೊಬ್ಬಿದ್ದ ದೇಹದಲ್ಲಿ ಚರ್ಮ ಸುಕ್ಕಾಗಿದ್ದರೂ ಕಟ್ಸ್ ಎದ್ದೆದ್ದು ಕಾಣುತ್ತಿತ್ತು.ಅಂಥಾ ಕೊರಗಜ್ಜನ ಬಾಯಲ್ಲಿ ಒಂದು ಮಾತು ಯಾವಾಗಲೂ ಬರುತ್ತಿತ್ತು ನಾನು ಸಧ್ಯಕ್ಕೆ ಸಾಯಲ್ಲ ಎಲ್ಲರ ಚಂದ ನೋಡಾಯ್ತು ಇನ್ನೊಬ್ಬರದು ಬಾಕಿ ಇದೆ........ಅದು ನನ್ನ ಮದುವೆಯಾಗಿತ್ತು.ಕೊರಗಜ್ಜನ ಈ ಆಸೆಗೆ ಕಾರಣವೂ ಇತ್ತು ನಾನು ಚಿಕ್ಕೋನಿದ್ದಾಗ ಕೊರಗಜ್ಜನ ಸಂಸಾರ ನಮ್ಮ ಕೊಟ್ಯ(ದಾಸ್ತಾನು ಮನೆ)ದಲ್ಲಿತ್ತು.ನನ್ನನ್ನು ನಾಗಮ್ಮ ಕೊಡೋ ಬೆಲ್ಲ ಬಾಯಿಗಿರಿಸಿ ಹೆಗಲ ಮೇಲೆ ಕುಳ್ಳಿರಿಸಿ ಇಡೀ ಗದ್ದೆ ಸುತ್ತಾಡಿಸುತ್ತಿದ್ದ.ಆ ಹಕ್ಕಿನಿಂದ ಅವನು ಹೇಳುತ್ತಿದ್ದ ನಾನು ಎತ್ತಿ ಆಡಿಸಿದ ಕುರ್ಲೆ (ಚಿಕ್ಕ ಮರಿ)ಅದು ಎಂದು.
ಕೊರಗಜ್ಜ ನಮ್ಮ ಮನೆಯ ನಗುವಲ್ಲೂ ಅಳುವಲ್ಲೂ ಸಮಭಾಗಿಯಾಗಿದ್ದ. ನಮ್ಮ ಮನೆಯ ಎಲ್ಲ ಭೂತಗಳೂ ಅವನಿಗೆ ಆತ್ಮೀಯರಾಗಿದ್ದರು ಯಾಕಂದ್ರೆ ಆ ಭೂತಗಳಿಗೆ ಅಗೆಲ್(ಕೋಳಿ ಹರಕೆಯ ಅಡುಗೆ)ಮಾಡಿ ಬಡಿಸುವವನು ಅವನೇ ಆಗಿದ್ದ.ರಾತ್ರಿ ಹೊತ್ತು ಕಣ್ಣು ಕಾಣಿಸದ ಹಾಗಾಗುವವರೆಗು.ಆ ನಂತರವೆ ಆ ಪಟ್ಟ ಇನ್ನೊಬ್ಬ ಕೆಲಸದಾಳು ಚಂದ್ರಯಾಚಾರಿಗೆ ಸಿಕ್ಕಿದ್ದು.
ಅಂತೂ ಪಪ್ಪನಿಗೆ ನಿರಾಸೆ ಮಾಡಿದ್ದ ನನ್ನ ಮದುವೆ ಅವರ ಸಾವಿನ ನಂತರ ಗೊತ್ತಾಯಿತು.ಕೊರಗಜ್ಜನಿಗೆ ಹೊಸ ಬಟ್ಟೆ ಕೊಡಿಸಿದ್ದೆ .ಮದುವೆಯ ದಿನ ಮಂಟಪದ ಎದುರು ಅದ್ಯಾಕೆ ಗಂಟೆಗಳ ಕಾಲ ನಿಂತಲ್ಲೆ ನಿಂತಿದ್ದನೋ..........
ನಾನು ಕೊಡಿಸಿದ್ದ ಹೊಸ ಬಟ್ಟೆ ಹಾಕಿಕೊಂಡು ಹಗಲು ಹೊತ್ತು ಒಂದೆರಡು ದಿನ ಊರು ತುಂಬ ತಿರುಗಾಡಿದ್ದ .ಅಲ್ಲಲ್ಲಿ ನನ್ನ ಹೆಸರು ಹೇಳುತ್ತಿದ್ದನಂತೆ.......ಕೊರಗಜ್ಜ ನನ್ನ ಮದುವೆಯ ದಿನ ಅದ್ಯಾಕೆ ತುಂಬಾ ಹೊತ್ತು ನಿಂತಲ್ಲೆ ನಿಂತು ನೋಡುತ್ತಿದ್ದ ಅನ್ನುವುದಕ್ಕೆ ನನ್ನ ಮದುವೆಯ ಎರಡನೇ ದಿನ ಉತ್ತರ ಸಿಕ್ಕಿತ್ತು......ಕೊರಗಜ್ಜ ಕೆಟ್ಟ ನಿರ್ಧಾರ ಮಾಡಿದ್ದ ಕೊನೆಗಾಲದಲ್ಲಿ ಇನ್ನೊಬ್ಬರ ಹಂಗಲ್ಲಿ ಬದುಕಲಾರೆ ಅನ್ನುತ್ತಿದ್ದ ಮಾತು ನಿಜ ಮಾಡಿದ್ದ ಇನ್ನು ಮುಂದಕ್ಕೆ ಈ ಮುಪ್ಪು ನನ್ನನ್ನು ಕೆಟ್ಟದಾಗಿ ಕಾಡುತ್ತೆ ಅನ್ನುವ ಸತ್ಯ ಗೊತ್ತಿದ್ದ ಅಜ್ಜ ಅದೆಶ್ಟು ಶಕ್ತಿ ಸೇರಿಸಿ ತನ್ನ ಪ್ರೀತಿಯ ಸೂರಿನ ಅಟ್ಟ ಹತ್ತಿದ್ದನೋ......ಅಜ್ಜ ಯಾರ ಹಂಗಿಲ್ಲದೆ ಕೆಟ್ಟದಾಗಿ ನೇತಾಡುತ್ತಿದ್ದ......
ನ್ಯಾಯವೆ........ ಅನ್ಯಾಯವೆ........

0 Comments:

Post a Comment

Subscribe to Post Comments [Atom]

<< Home