Friday, September 4, 2009

ಅಮ್ಮಾ...

ಅಮ್ಮಾ ...
ಕಣ್ಮುಚ್ಚಿ... ಮನಬಿಚ್ಚಿ...ದೀರ್ಘ ಉಸಿರು ತೆಗೆದು ಆ ಉಸಿರಿಗೆ ಮೆಲುಧ್ವನಿ ಸೇರಿಸಿ ನಿಧಾನಕ್ಕೆ ಅಮ್ಮಾ ಎಂದು ಹೇಳಿಕೊಂಡಾಗ...ಅದೆಷ್ಟು ಫ್ಲಾಷ್ ಬ್ಯಾಕ್ ದ್ರಷ್ಯಗಳು ಹಾದು ಹೋಗುತ್ವೋ...ಅವೆಷ್ಟು ಸರ್ತಿ ಅಮ್ಮ ನಕ್ಕಿದ್ದು ಅತ್ತಿದ್ದು ಗದರಿದ ಮುಖಭಾವದ ಫೋಟೊಗಳು ಕ್ಲಿಕ್ಕಿಸಿಕೊಂಡಂತಾಗುವುದೋ... ನಾವು ಹೀಗೆ ಪ್ರಯತ್ನಿಸಿದರೆ ಅಮ್ಮನ ಬಗ್ಗೆ ಸುಂದರವಾದ ಭಾವಗೀತೆಗಳನ್ನ ಬರೆಯಬೇಕೆಂದಿದ್ದರೆ ಬರೆಯಬಹುದು, ಆ ಭಾವಗೀತೆಗೆ ಪದಗಳ ಸಾಲು ಸಿಗದೇ ಇದ್ದರೆ ಇದಿಷ್ಟು ಮಾಡಿದರೆ.... ಭಾವಗೀತೆಯ ಚಿತ್ರಣವಾದರೂ ಸಿಗುತ್ತದೆ.
ಕೋಟಿ ಕೋಟಿ ಅಮ್ಮಂದಿರಲ್ಲಿ ಒಬ್ಬಾಕೆ ಅಮ್ಮನ ಗುಡಿಸಲ ಬಾಗಿಲಿಗೆ ಹೋಗೋಣ್ವ.
ಮುದರು...
ಹೆಸರು ಕೇಳುವುದಕ್ಕೆ ವಿಚಿತ್ರ ಅನ್ನಿಸುತ್ತೆ, ಹೆಸರಲ್ಲೇನಿದೆ...
ಮುದರು ಸ್ವಲ್ಪ ಎಡವಟ್ಟಾದರು ಈ ಹೆಸರು ಮುದುರು ಆಗಬಹುದು.ಮುದರುವಿನ ಬದುಕೇ ಕಾಡುಗಳ ಮಧ್ಯೆ ಐದು ಗುಡಿಸಲುಗಳಲ್ಲಿ ಒಂದರಲ್ಲಿ ಮುದುರಿಕೊಂಡಿತ್ತು.ತಾಯಿ ಪ್ರೀತಿಯ ಅದಷ್ಟೂ ಮಮಕಾರಗಳನ್ನು ತಬ್ಬಿಕೊಂಡು.ಈ ಗುಡಿಸಲುಗಳಿಗೆ ಪರ್ಲಾಂಗಿನಷ್ಟು ದೂರದಲ್ಲಿ ಬಚ್ಚಿರೆ ಭಟ್ಟರ ತೋಟದ ಮನೆ ಅಲ್ಲಿ ಮುದರು ಮತ್ತು ಅವಳ ಗಂಡ ಮೋಂಟನಿಗೆ ದಿನಕೆಲಸ.
ಮುದರುವಿನ ಮನೆಯಲ್ಲಿ ಎರಡುಮೂರು ಬೊಗ್ಗಿಗಳು (ಬೊಗ್ಗಿ-ಹೆಣ್ಣು ನಾಯಿ)ಪ್ರತಿವರ್ಷದಂತೆ ಮರಿಹಾಕಿದಾಗ ಗಂಡುಮರಿಗಳನ್ನು ಭಟ್ಟರ ಮನೆಗೆ ಕೊಡಬೇಕು ಹೇಣ್ಣಾದರೆ ತಾನೇ ಸಾಕಬೇಕು.ಮುದರುವಿನ ಮನೆಯ ಬೊಗ್ಗಿಗೆ ಒಳ್ಳೆಯ ಹೆಸರು ಇದ್ದಿದ್ದರಿಂದಾಗಿ ಹೆಣ್ಣುಮರಿಗಳಿಗೂ ಬೇರೆಯವರಿಂದ ಬೇಡಿಕೆ ಇತ್ತು.ಯಾರೇ ಮರಿಕೇಳುವುದಕ್ಕೆ ಬಂದರೂ ಅನ್ನ ಹಾಕುವುದು ಕಮ್ಮಿಯಾದರೂ ಪರವಾಗಿಲ್ಲ ಪ್ರೀತಿ ಕಮ್ಮಿ ಮಾಡಬೇಡಿಪಾಪ ಮಾತು ಬರದವು ಅಂತಾಳೆ ಮುದರು.ಮರಿಗಳನ್ನು ನಿಮಗೆ ಕೊಡುತ್ತಿಲ್ಲ ನನ್ನ ಮಕ್ಕಳನ್ನ ಕೋಡುತ್ತಿದ್ದೇನೆ ಎಂದು ಹೇಳುತ್ತಲೇ ನಾನು ಒಂದು ರೀತಿ ನಿಮ್ಮ ಮ್ಮನೆಗೆ ಬೀಗತಿ ಇದ್ದ ಹಾಗೆ ಅಂದು ಬಾಯಿತುಂಬ ನಗುತ್ತಾಳೆ.
ಮುದರುವಿಗೆ ಇಬ್ಬರು ಮಕ್ಕಳು ದೊಡ್ಡವನಿಗೆ ಎರಡೂವರೆ ವರ್ಷ ಚಿಕ್ಕವಳಿಗೆ ಹನ್ನೊಂದು ತಿಂಗಳು .ತಾವಿಬ್ಬರು ದುಡಿಯುವುದರಲ್ಲಿ ಸಂಸಾರ ಮತ್ತು ನಾಯಿ ಸಂಸಾರನೂ ಸಾಗಿಸಬೇಕಿತ್ತು ಗಂಡ ಮೋಂಟನಿಗೂ ಇದು ಬೇಸರ ತರುವ ವಿಚಾರ ಆಗಿರಲಿಲ್ಲ, ಬದಲಾಗಿ ಸಂಜೆ ಹೊತ್ತಲ್ಲಿ ಕಳ್ಳು ಕುಡಿದು ರಾತ್ರಿ ಮನೆಗೆ ಬಂದ ನಂತರ ನೀನು ನನ್ನಯಾಕೆ ಮದುವೆ ಆದೆ ಒಂದು ಒಳ್ಳೆ ನಾಯಿನೆ ನೋಡಿ ಆಗಬಹುದಿತ್ತಲ್ಲ ಅಂದಾಗ ಮುದರು ಇದ್ದಿದ್ದರಲ್ಲಿ ದಪ್ಪಗಿರುವ ನಾಯಿಯ ಬೆನ್ನು ಚಪ್ಪರಿಸುತ್ತ ಮದುವೆಯ ಸಂದರ್ಭ ನೀನೂ ಹೀಗೇ ಇದ್ದೆ ಎಂದು ರೇಗಿಸುವಳು ಆಗ ಮೋಂಟ ಅವಳಿಗಾಗಿ ಕುಪ್ಪಿಯಲ್ಲಿ ತಂದ ಕಳ್ಳನ್ನು ತಾನೇ ಕುಡಿಯುತ್ತ ಜೋರಾಗಿ ಸಂದಿ ಹಾಡುತ್ತ ಗಂಜಿಯ ಬಟ್ಟಲಿನ ಮುಂದೆ ಕೂರುತ್ತಿದ್ದನು.
ಒಂದು ದಿನ...
ಮುದರುವಿನ ಮನೆಯಲ್ಲಿ ರಾತ್ರಿಯವರೆಗೂ ಆರೋಗ್ಯವಾಗೇ ಇದ್ದ ಬೊಗ್ಗಿ ಮಿಣ್ಕು ಅಸುನೀಗುತ್ತದೆ ಮೋಂಟ ಇದು ಭೂತದ ಪೆಟ್ಟು ಅಂತಾನೆ.ಮುದರು ಅಳುತ್ತಾಳೆ ಮೋಂಟ ಸಮಾಧನಿಸುತ್ತಾನೆ.ಮಿಣ್ಕು ಮೂರುಮರಿಗಳನ್ನ ಅನಾಥವನ್ನಾಗಿಸಿ ಹೆಣವಾಗಿದ್ದಾಳೆ.ಆ ನಂತರ ಗೊತ್ತಗಿದ್ದು ಮಿಣ್ಕು ಸತ್ತಿದ್ದು ಬೊಮ್ಮಣ ಪೊಜಾರಿಯವರು ಇಟ್ಟ ವಿಷಕ್ಕೆ.ಇದಾದನಂತರ ಒಂದೆರಡು ದಿನ ಮುದರುವಿಗೆ ಕೆಲಸಕ್ಕೆ ಹೋಗಲಾಗಲಿಲ್ಲ ಮರಿಗಳು ಅಳುತ್ತಿದ್ದವು...ಭಟ್ಟರ ಕೊಟ್ಟಿಗೆ ಸೊಪ್ಪು ಹಾಕದೆ ಹಸುಗಳು ಹಾಲು ಕೊಡುತ್ತಿರಲಿಲ್ಲ.ಮಾರನೆಯ ದಿನ ಬೆಳ್ಳಂಬೆಳಗ್ಗೆ ಭಟ್ಟರು ದೂರದಿಂದ ಕೂಗುತ್ತಾ ಬಂದರು ಅವರುಗೂ ಸತ್ತ ನಾಯಿ ಭಯ ಇತ್ತು.ಭಟ್ಟರ ಕೂಗಿಗೆ ಮೋಂಟ ಇನ್ನೋಂದು ಬದಿಯಿಂದ ಓಡಿಹೋಗಿ ಅವರ ಹಿಂದೆಯೇ ನಿಂತು ಅವನೂ ಕೂ ಹಾಕಿ ಏನೆಂದು ಕೇಳುತ್ತಾನೆ .ನೀನೆಲ್ಲಿದ್ದೆ ಅಂದಾಗ ತೋಟದಲ್ಲಿದ್ದೆ ನಿಮ್ಮ ಕೂ ಕೇಳಿ ಹೀಂದೆನೇ ಒಡಿಬಂದೆ ಅನ್ನುವುದು ಮುದರುವಿಗೆ ಕೇಳಿ ನಿನ್ನೆ ರಾತ್ರಿ ತೋಟದಲ್ಲೇ ಮಲಗಿದ್ದ ಎಂದು ನಗುತ್ತಾಳೆ ಮೋಂಟ ಹೌದು ಅಡಿಕೆ ಕಾಯುತ್ತಿದ್ದೆ ಅಂದಾಗ ಭಟ್ಟರಿಗೆ ಸಂಬಳ ಕೊಡುವು ಸಾರ್ಥಕ ಅನ್ನಿಸುತ್ತದೆ.
ಎರಡುದಿನದಿಂದ ಕೆಲಸಕ್ಕೆ ಬಾರದ ಮುದರುವಿಗೆ ಗದರದಿದ್ದರೆ ಸರಿ ಇಲ್ಲ ಅಂದವರೇ ಭಟ್ಟರು ಎರಡು ಹೆಜ್ಜೆ ಮುಂದೆ ಹೋಗಿ ಎಲೆಯಡಿಕೆ ಹಾಕಿದ ಅಗಲಬಾಯಿ ತೆರೆದವರೆ ಸುಮ್ಮನಾಗುತ್ತರೆ ಮಾತೇ ಹೊರಡುವುದಿಲ್ಲ.
ಮುದರುವಿನ ಎತ್ತರದೆದೆ ಅವರ ಕಣ್ನು ಸೆಳೆಯುತ್ತದೆ ದೂರದಲ್ಲಿರುವ ಅವಳ ಅರೆನಗ್ನ ಮಗನೂ ನಗ್ನ ಮಗಳು ಕಾಣಿಸುತ್ತಾಳೆ...ಆದರೂ ಭಟ್ತರಿಗೆ ಅಲ್ಲಿಂದ ಕಣ್ಣು ಕದಲಿಸಲಾಗುವುದಿಲ್ಲ ಮೋಂಟ ಅವರ ಹತ್ತಿರ ಬರುತ್ತಾನೆ ಅವರನ್ನೂ ಹೆಂಡತಿಯನ್ನೂ ನೋಡುತ್ತಾನೆ ,ಹೆಂಡತಿಗೆ ಆಚೆ ಹೋಗುವಂತೆ ಕೈಸನ್ನೆ ಮಾಡುತ್ತಾನೆ ಅವಳು ನೋಡಲೇ ಇಲ್ಲ,ಭಟ್ಟರ ತೆರೆದ ಬಾಯಿ ಕಣ್ಣುಗಳು ಹಾಗೇ ಇದ್ದವು.ಮುದರುವಿನ ಉಬ್ಬಿದ ಸೆರಗಡಿಯಿಂದ ಒಂದು ನಾಯಿಮರಿ ಜಾರಿ ಕೆಳಗೆ ಬೀಳುತ್ತದೆ.ಅದರ ಬಾಯ ಕೊನೆಯಲ್ಲಿರುವ ಹಾಲಿನ ಹಸಿ ಹಸಿ ಹನಿಯನ್ನು ನಾಲಿಗೆಯಿಂದ ಸವರಿಕೊಳ್ಳುತ್ತದೆ.ಸೆರಗೊಳಗೆ ಇನ್ನೂ ಎರಡು ಮರಿಗಳಿರುವುದು ಭಟ್ಟರಿಗೆ ಅರಿವಿಗೆ ಬಂತು. ಮೋಂಟ ಮೆತ್ತಗೆ ಅವರ ಕಿವಿಗುಸಿರಿದ ಮೊನ್ನೆ ಮಿಣ್ಕು ತೀರ್ಕೊಂಡ್ಲು ಈಗ ಇವಳೇ ಮರಿಗಳಿಗೆ...
ಇದ್ಯಾವುದರ ಪರಿವೆಯೇ ಇಲ್ಲ ಅನ್ನುವಂತೆ ಮುದರು ಜಾರಿ ಬಿದ್ದ ಮರಿಯನ್ನು ಮತ್ತೆ ಸೆರಗೊಳಗೆ ಸೇರಿಸುತ್ತಾ ಮೆತ್ತಗೆ ಆ ಮರಿಗಳಿಗೆ ಗದರತೊಡಗಿದಳು .
ಯಾಕೆ ಅವಸರ ಪಟ್ಕೋತಿದ್ದೀರಾ...ಅವಳ ಮುಂದೆ ಕುಳಿತು ತಾಯಿಯನ್ನೇ ನೋಡುತ್ತಿದ್ದ ಮಕ್ಕಳ ಮುಖದಲ್ಲಿ ಗೊತ್ತಿರದ ಕಿರುನಗು ಆಗಾಗ ಬಂದು ಹೋಗುತ್ತಿತ್ತು.
ಮೋಂಟನಿಗೆ ಭಟ್ಟರು ಮುದರು ಹತ್ತು ದಿನ ಕೆಲಸಕ್ಕೆ ಬರುವುದು ಬೇಡ ಸಂಬಳ ಕಟ್ಟು ಮಾಡುವುದಿಲ್ಲ ಅಂದು ತುಂಬಿಕೊಂಡ ಕಣ್ಣೀರು ಒರಸುತ್ತಾ ಹಿಂತಿರುಗಿದರು.
ಅಮ್ಮಾ ನಿನಗೆಷ್ಟು ರೂಪ...?