Tuesday, July 22, 2008

ಮೇರಾ ಭಾರತ್ ಮಹಾನ್ ಹೈ

ಅಣುಬಂಧ........ಇಡೀ ದೇಶ ಮಾತ್ರವಲ್ಲ ಪ್ರಪಂಚವೇ ಪಾರ್ಲಿಮೆಂಟಿನತ್ತ ನೋಡುತ್ತಿತ್ತು.ನಮ್ಮ ನಾಯಕರು ಬಟ್ಟೆ ಉಟ್ಟಂತೆಯೆ ಬೆತ್ತಲಾಗಿ ಕಾಣುತ್ತಿದ್ದರು.ಜವಾಬ್ದಾರಿ ಮರೆತವರ ಅಸಹ್ಯ ನಡವಳಿಕೆಯ ಕೇಂದ್ರದಂತಿತ್ತು.ದೇಶದ ಮಹತ್ತರ ವಿಚಾರದ ಚರ್ಚೆ ಜುಗಾರಿ ಕೇಂದ್ರದಂತಿತ್ತು.ಜೈಲಿನಿಂದ ಪರಾರಿಯಾದವರಿಗೆ ಗುಂಡಿಟ್ಟು ಸಾಯಿಸುತ್ತೇವೆ,ಆದರೆ ಇಲ್ಲಿ ರಾಜಮರ್ಯಾದೆಯಿಂದ ಕರೆಸಿ ಅವರಿಂದಲೆ ಬಹುಮತದ ಬಿಕ್ಶೆ ಬೇಡಿತ್ತು, ದೇಶ ನಡೆಸೋ ಪಾರ್ಟಿಗಳು.ಅಣುಬಂದಕ್ಕೆ ಸಹಿ ಹಾಕಿದರೂ ದಾಸ್ಯವೆ ಸಹಿ ಹಾಕದಿದ್ದರೂ ಕತ್ತಲ,ಶಕ್ತಿಯ ದಾಸ್ಯ ಎಂಬಂಥಾ ದುರ್ದೈವ ನಮ್ಮ ಪಾಲಿಗೆ. ಭಾರತ ಹುಟ್ಟಿನಿಂದಲೆ ದಾಸ್ಯದ ಆತ್ಮವೆಂದೇ ಬಾವಿಸಿಕೊಂಡು ನಂಬಿಕೊಂಡು ಮನಸಾ ಒಪ್ಪಿಕೊಂಡುನಮ್ಮ ಹಿರಿಯರನೇಕರು ಬದುಕಿದ್ದಾರೆ ನಾವೂ ಬದುಕುತ್ತಿದ್ದೇವೆ.ನಮ್ಮನ್ನು ಆಳುವುದಕ್ಕೆ ವಿದೇಶೀಯರೆ ಅತ್ಯಂತ ಅರ್ಹರು ಎಂದು ವಿನಯಾತಿವಿನಯದಿಂದ ಅವರ ಕಾಲಡಿಗೆ ಬಿದ್ದವರು ನಾವು.ಯಾರೇ ಬುದ್ದಿವಾದ ಹೇಳುವಾಗಲೂ ಚರಿತ್ರೆ ಮರೀಬೇಡ ಅಂತಾರೆ ನಾವು ಅದಕ್ಕೆ ತಕ್ಕಂತೆ ದಾಸ್ಯವನ್ನು ಬಿಡಲೇ ಇಲ್ಲ.ಗಂಡಸುತನವನ್ನ ಅಡವಿಟ್ಟುದಾಸ್ಯವನ್ನು ಒಪ್ಪಿಕೊಂಡಿದ್ದೇವೆಯೇ.......?

ಇನ್ನೊಂದು ದುರಂತ ಅಂದ್ರೆ ನಿಶ್ಟೆಕಮ್ಮಿಯವರು,ನಾವು ಬಡತನದ "ಕುರು"ಹಗಳೆಂದು ಬಾಯಿಬಾಯಿ ಬಡ್ಕೋತಾರೆ,ನಮ್ಮ ದೇಶಕ್ಕೆ ಬೇಡವಾದ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ,ಒಟ್ಟೊಟ್ಟಿಗೇ ತಮ್ಮನ್ನೂ,ನಮ್ಮೆಲ್ಲರನ್ನೂ ಇನ್ಯಾರಿಗೋ ಒಪ್ಪಿಸಿಕೊಳ್ಳುವ ಚಾಳಿ ಹುಟ್ಟಿನಿಂದಲೇ ಮುಂದುವರೆಸಿಕೊಂಡುಬಂದಿದ್ದಾರೆ.ಇವರಿಗೆತಮ್ಮ ಹೊರತಾಗಿ ಎಲ್ಲರ ಹಿತ ಮುಖ್ಯವಾಗಿಯೇ ಇಲ್ಲ. ಯಾವತ್ತಿಗೂ....ಆಗುವುದೂ ಇಲ್ಲವೇನೋ.....ಯಾರದೋ ಸೂತ್ರದ ಸೂತಕದವರು ಇವರು,ಯಾರದೋ ಸಿದ್ಧಾಂತದ ಕೂಸುಗಳಿವರು.

ಯಾವುದರಿಂದ ಹೆಚ್ಚುಲಾಭ ನಶ್ಟದ ಲೆಕ್ಕಪಕ್ಕಕ್ಕಿಟ್ಟು ಎಲ್ಲ ನಾಯಕರು ಯಾವ್ಯಾವುದೋ ಇಕ್ಕಟ್ಟು "ಪಕ್ಕಾಕಟ್ಟು"ಗಳಿಗೆ ಗಾಳ ಬಿದ್ದು ಸ್ವಾಭಿಮಾನ ಮಾರೋ ನಂಗಾನಾಚ್ನಲ್ಲಿ ತೇಲಿಹೋದರು.ಕೆಲ ಪಾರ್ಟಿ ನಾಯಕರಂತು ಕೊನೆದಿನದ ತನಕ ಯಾರ ಎಂಜಲು ಹೆಚ್ಚು ಸ್ವಾದ ಅನ್ನುವ ರೀತಿ ಹುಡುಕಾಡಿ ದೇಶಭಕ್ತಿಯ ಹೆಸರಲ್ಲಿ ತಮ್ಮ ಮೇಲೆ ತಾವೇ ವ್ಯಭಿಚಾರ ಮಾಡಿಕೊಂಡರು,ಇದಕ್ಕೊಂದಶ್ಟು ಜನ ಮೀಡಿಏಟರುಗಳು ಸಮರದಲ್ಲಿ ಸೈನಿಕರೂ ನಾಚುವಂತೆ ಹೋರಾಡಿದರು.ಇಂತಹವರನ್ನೂ ನಂಬದ ಕೆಲಜನ ಸ್ವಮೈಥುನಕ್ಕಿಳಿದು ನೇರವಾಗಿ ತಮ್ಮನ್ನು ಮಾರಿಕೊಂಡರು.ಇಂದು ಇವತ್ತಿನವರೆಗೆ ತಮ್ಮ ಪಕ್ಶದ ಸಿದ್ದಾಂತ ಹೀಗೆ ಎಂದು ಅರಚುತ್ತಿದ್ದ ನಾಯಕರು ಇಂದು ಪಾರ್ಲಿಮೆಂಟಿನಲ್ಲಿ ನಡೆದುಕೊಂಡ ರೀತಿ ನೋಡಿದರೆ ಇದು ಎಂಥಹವರಿಗು ಅರ್ಥವಾಗದ ವಿಚಾರವಲ್ಲ.

ಚುಣಾವಣಾ ಆಯೋಗ ಜನರಿಗೆ ದುಡ್ಡು ಹಂಚಿ ಓಟು ದೋಚುವ ಅಭ್ಯರ್ಥಿಗಳನ್ನು ಗುರುತಿಸಿ ಕೇಸು ಹಾಕುತ್ತದೆ ಆದರೆ ಇಲ್ಲಿ ಏನುಮಾಡಲು ಸಾಧ್ಯ.ಗಹಗಹಿಸುತ್ತ ಯಾರ ಅಂಜಿಕೆಯೂ ಇಲ್ಲದೆ ರಾಜಾರೋಶವಾಗಿ ಕೋಟಿ ಕೋಟಿ ಹಂಚುತ್ತಾರೆ.ಸ್ಪೀಕರ್ ಮುಂದೆಯೆ ಪ್ರದರ್ಶನವಾಗುತ್ತದೆ ಕೆಮರಾ ದೇಶಕ್ಕೂ ವಿದೇಶಕ್ಕೂ ಇದನ್ನು ತೋರಿಸುತ್ತದೆ ಇದಾವುದರ ಪರಿವೆ ಇಲ್ಲದ ಜೂಜುಕೋರರು ಕರ್ಕಶವಾಗಿ ಕಿರುಚಾಡುತ್ತಾ ಊಳಿಡುತ್ತಾ ತಮ್ಮ ಮೇಧಾವಿತನವನ್ನು ಪ್ರದರ್ಶಿವುದರಲ್ಲಿ ತಲ್ಲೀನರಾಗಿದ್ದರು. ಪ್ರತಿಯೊಬ್ಬ ಜನರ ಬಳಿಹೋಗಿ ನೋಟು ಹಂಚುವ ಕೆಲಸಕ್ಕಿಂತ ಮಧ್ಯವರ್ತಿಗಳ ಮೂಲಕ ರಖಂ ಆಗಿ ಹೀಗೆ ವಿಕ್ರಯಿಸುವುದು ಸುಲಭ ದಾರಿ ಅಂದುಕೊಂಡಿರುತ್ತಾರೆ.ಇಲ್ಲಿ ಯಾರದ್ದು ತಪ್ಪು ಕೊಟ್ಟವನದ್ದೋ ತಗೊಂಡವನದ್ದೋ.....ಸೂಳೆಗಾರಿಕೆಯಲ್ಲಿ ಪರವಹಿಸಿ ಮಾತಾಡಿದಂತಾಗುತ್ತದೆ.ಇಬ್ಬರೂ ನಾರುವವರೆ.ಮೈ ಮಾರುವಿಕೆಯಲ್ಲಿ ವ್ಯಕ್ತಿ ರೋಗ ತಗುಲಿಸಿಕೊಳ್ಳುತ್ತಾನೆ ಇಲ್ಲಿ ಸಮಾಜಕ್ಕೆ ರೋಗ ತಗುಲಿಸುತ್ತಾರೆ.....ದೇಶ ನರಳುತ್ತದೆ......ಆದರೂ ಇವರು ತೊದಲುತ್ತಾರೆ ದೇಶದ ಹಿತಕ್ಕಾಗಿ ಎಂದು.

ಅಂತು ಇಂತೂ ಏನೋ ಒಂದಾಗಿ ಕೆಲವರು ನಕ್ಕರು, ಮತ್ತಶ್ಟು ಬೈದರು,ನಿಮ್ಮ ತಲೆಯೊಳಗೇನಿದೆ ನೋಡಿಕೊಳ್ಳಿ ಅಂದರು.ಕೆಲವರು ಮುಖಕಪ್ಪಾಗಿಸಿಕೊಂಡರು ತಾವೇನು ಕಮ್ಮಿ ಅನ್ನುವಂತೆ ಮಾತಿನ ವಾಂತಿ ಮಾಡಿದರು.ಪಾರ್ಲಿಮೆಂಟಿನ ಒಳಗೆ ಎಶ್ಟು ಕುಲಗೆಟ್ಟಿತ್ತೋ ವಾತಾವರಣ,ಹೊರಗೂ ಇನ್ನೊಂದಶ್ಟು ನಾರುವಂತೆ ಅಚ್ಚುಕಟ್ಟಾಗಿ ನೋಡಿಕೊಂಡರು.

ಇಲ್ಲಿ ಯಾರೂ ಗೆದ್ದಿಲ್ಲ ಯಾರೂ ಸೋತಿಲ್ಲ....... ರಾಜಕೀಯದ ಸಾಂಕ್ರಾಮಿಕ ರೋಗ ಹರಡಿಸಿದರು......ಕುಲಗೇಡಿಗಳಾಗೋದು ಹೇಗೆ ಎಂದು ಮುಂದಿನವರಿಗೆ ಮಾದರಿಯಾದರು.....

ಸೋತರೂ ಗೆದ್ದರೂ ದೇಶದ ಹಿತಕ್ಕಾಗಿ ಅನ್ನುವ ಕುರುಹು ಅಲ್ಲೆಲ್ಲೂ ಇರಲಿಲ್ಲ.....ಕೊನೆಗೆ ಗೆದ್ದವರ ಅಣಕವಾಡುವ ನಗುವ ಮಧ್ಯೆ ಸೋತವರ ಕಪ್ಪಿಟ್ಟ ಮುಖದ ಮಧ್ಯೆ ತೇಲಿಬಂದ ರಾಶ್ಟ್ರಗೀತೆ ಯಾರಿಗೋ ಎಂಬಂತಿತ್ತು. ಸ್ಪೀಕರ್ ಸೈಲೆನ್ಸ್ ಅನ್ನುವವರೆಗೂ.

ಮೇರಾ ಭಾರತ್ ಮಹಾನ್ ಹೈ

0 Comments:

Post a Comment

Subscribe to Post Comments [Atom]

<< Home