Friday, June 5, 2009

ಕರ್ಮ

ಕೋಗಿಲೆ......
ಈ ಹೆಸರನ್ನ ನಿನಗ್ಯಾಕಿಟ್ಟರೋ ಯಾರಿಟ್ಟರೋ....ಅವರು ಸಿಕ್ಕರೆ ನಿನ್ನ ಜಾತಕ ಕೇಳೋಣ ಅಂತಿದ್ದೀನಿ ಯಾಕೆ ಗೊತ್ತಾ ,ನಿಂದ್ಯಾವ ಕರ್ಮದ ಬದುಕು ಅಂತಾನೆ ನಿನ್ನನ್ನ ನಿನ್ನ ದನಿಯನ್ನ ನಿನ್ನ ಹಾಡನ್ನ ಹೊಗಳಿದ ಕವಿಗೂ ಇಷ್ಟ ಪಟ್ಟ ಕೇಳುಗನಿಗೂ ಇವತ್ತಿಗೂ ಗೊತ್ತಿಲ್ಲ.ಎಲ್ಲರಿಗೂ ತಿಳಿದಿರುವುದೊಂದೇ ನೀನು ಸೋಮಾರಿ.
ಎಲೆ ಸೋಮಾರಿಯೇ.....

ನೆನ್ನೆ ನಿನ್ನ ಒಂದು ಕರ್ಮ ನೋಡಿದೆ, ಹಸಿವು ಅಂತ ಊಟಕ್ಕೆ ಕೂತಿದ್ದೆ, ನೀನು ನನ್ನ ತುತ್ತನ್ನ ತಡೆದೆ ತುತ್ತು ಬಾಯಿಗೆ ಹೋಗುತ್ತಿದ್ದಂತೆ ನೀನೇ ಮಾರ್ಮಿಕಕವಾಗಿ ಅಳುವ ಬದುಕಿಸಲಾರಿರಾ ಅನ್ನುವ , ಕುಹೂ ಕುಹೂ ದನಿಯಲ್ಲಿ ಸತ್ತೇಹೋದೆ ಅನ್ನುವ ಗೊಗ್ಗರು ದನಿ ಕೇಳಿದೆ. ಅದೆಷ್ಟು ರಾಕ್ಷಸರು ನಿನ್ನನ್ನು ಮುತ್ತಿ ಕೇಕೆ ಹಾಕುತ್ತಿದ್ದರು ,ನೀನೋ ಭಯಾನಕವಾಗಿ ರೆಕ್ಕೆ ಪುಕ್ಕಗಳನ್ನು ಕಳೆದುಕೊಳ್ಳುತ್ತ ಅವರು ಕೊಡುವ ಏಟುಗಳನ್ನು ತಿನ್ನುತ್ತಾ ಅಲ್ಲಲ್ಲಿ ನೆತ್ತರು ಚಿಮ್ಮಿಸುತ್ತಾ ಕಿಟಾರ್ ಅಂತಿದ್ದೆ .ನಾನು ಹಾ... ಚೂ... ಅಂದು ನಿನ್ನ ಸುತ್ತಲಿರುವವರನ್ನು ಓಡಿಸಲು ಯತ್ನಿಸಿದರೂ ಪಾಲಿಸಲಿಲ್ಲ.ನಾನು ನಿನ್ನಿಂದ ದೂರ ಇದ್ದೆ ನೀನಿರುವ ಕಟ್ಟಡದ ಆಚೆ ಬದಿಯ ಇನ್ನೊಂದು ಮನೆಯಲ್ಲಿ ಅದೂ ಕಿಟಿಕಿಯ ಸರಳುಗಳ ಹಿಂದೆ. ನಿನ್ನ ಕಣ್ಣುಗಳು ನೀನು ಹಾಡುವಾಗಲೆ ನೋಡಲಾಗದಷ್ಟು ಕೆಂಪು ಈ ಸ್ಥಿತೀಲಿ ನೋಡಲಂತು ಸಾಧ್ಯವೇ ಇಲ್ಲ ಅನ್ನೋವಷ್ಟು ಕೆಂಪು ಕೆಂಪು.....
ಅದು...
ದುಖವೋ ನಿನ್ನ ಹುಟ್ಟಿಗೆ ನಿನ್ನದೇ ಶಾಪವೋ ....
ಅದ್ಯಾರ ಬಳಿ ನೀನು ಕೇಳಿಕೊಂಡು ಬರುವೆಯೋ ಗೊತ್ತಿಲ್ಲ.ಆದರು ನನಗೆ ಉತ್ತರ ಬೇಕು ನೀನ್ಯಾಕೆ ಕೊನೆಪಕ್ಷ್ಯಗೂಡುಕಟ್ಟೋದನ್ನ ಕಲೀಲಿಲ್ಲ?..?
ಗರ್ಭಿಣಿ ಅಂತ ಗೊತ್ತಾಗೋದೆ ತಡ ಯಾರದೋ ಮನೆಗೆ ನುಗ್ತೀಯಲ್ಲ. . ಗೀಜಗನಂತೆ ಸುಂದರವಾಗಿರಬೇಕಾಗಿಲ್ಲ ನಿನ್ನ ಮೊಟ್ಟೆಯನ್ನ ನಿನ್ನದೇ ಜಾಗದಲ್ಲಿ ಇಡುವಂತಾದ್ದು ನಿನ್ನ ಮರಿಗಳನ್ನ ನೀನೇ ಬೆಳೆಸುವಂತಾದ್ದು.ಇಲ್ಲದಿದ್ದರೆ ನಿನ್ನ ಹಾಡನ್ನ ಮನಪೂರ್ತಿ ಆಲಿಸುವ ನಮ್ಮ ಕರ್ಮ ನೋಡು ಯಾವುದೇ ತಪ್ಪು ಮಾಡದ ನಿನ್ನ ಹಾಡುಗಾರ[ರ್ತಿ] ಮರಿಗಳು ಇನ್ಯಾರದೊ ರೆಕ್ಕೆಗಳಡಿಯಲ್ಲಿ ಹುಟ್ಟಿ ,ಮೋಸಹೋದ್ವಿ ಎಂದು ಆ ಕಾಗಮ್ಮಗಳಿಗೆ ಗೊತ್ತಾದಾಗ ಅವರು ಕಚ್ಚಿ ಕಚ್ಚಿ ಹಿಂಸೆ ಕೊಡೋದನ್ನ ನೋಡ್ಬೇಕಲ್ಲ.
ನಾವು ಮನುಷ್ಯರು ನಮ್ಮಲ್ಲೆ ಹಿಂಸೆಗೆ ಬರವಿಲ್ಲ ನೆಮ್ಮದಿಗೆ ಜಾಗವಿಲ್ಲ ಅಂದಾಗ ನಾವು ಮೆಚ್ಚಿದ ನಿನ್ನಲ್ಲೂ ಯಾಕೆ ಹೀಗೆ.?
ನಿನ್ನ ಬಗ್ಗೆ ಒಂದು ಸಂದೇಹ ಮೂಡ್ತಾ ಇದೆ ನೀನು ಖಂಡಿತ ಸೋಮಾರಿಯಲ್ಲ ಕಾಮರೂಪಿ .
ಮಾಮರ ಚಿಗುರಿದಾಗ ನೀನು ಹಾಡುವೆಯೋ....ನೀನುಹಾಡಿದಾಗ ಮಾಮರ ಚಿಗುರುವುದೋ ....ನಿನ್ನ ಮಾದಕ ದನಿಗೆ ನಮ್ಮ ಕಾಮದಲ್ಲೂ ಜಾಗ ಸಿಕ್ಕಿದ್ದಂತೂ ನಿಜ....ಒಂದಷ್ಟು ಮಕ್ಕಳು ಹುಟ್ಟಲ್ಲೆ ಬೀದಿಪಾಲಾಗಿದ್ದೂ ನಿಜ...
ವಂದನೆಗಳಿಗೆ ಮುನ್ನ ಗೂಡು ಕಟ್ಟಲಾಗದಿದ್ದರೆ ಹಾಡು ಕಟ್ಟುವುದೂ ನಿಲ್ಲಿಸು.

1 Comments:

At June 11, 2009 at 11:14 AM , Blogger Unknown said...

thumba chennagide.......:-)

 

Post a Comment

Subscribe to Post Comments [Atom]

<< Home