ಕಲ್ಯಾಣಿ
ಪುಟ್ಟದಾಗಿ ಮಲಗಿದ್ದರು,ಎಡ ಮಗ್ಗುಲಿಗೆ ಮಲಗಿದ್ದವರು ಕಾಲು ಎದೆಯೆತ್ತರಕ್ಕೆ ಮಡಚಿದ್ದಕ್ಕೆ ಇನ್ನೂ ಚಿಕ್ಕದಾಗಿ ಕಾಣುತ್ತಿದ್ದರು.ಎರಡೂಕೈಗಳಿಂದ ಕಾಲು ಮತ್ತೆ ಕೆಳಕ್ಕೆ ಜಾರದಂತೆ ಹಿಡಿದುಕೊಳ್ಳುತ್ತಿದ್ದರು ಚಳಿಗೆ ಮುದುರಿಕೊಳ್ಳುವ ಮಕ್ಕಳಂತೆ.ಚಿಕ್ಕಂದಿನಲ್ಲಿ ನಾವೂ ಹೀಗೆ ಮುಂಜಾವದಲ್ಲಿ ಇವರ ಸೆರಗೊಳಗೆ ಮನೆ ಮಾಡಿಕೊಂಡು ಮುದುರಿಕೊಳ್ಳುತ್ತಿದ್ದುದು ಇನ್ನೂ..........
ನೆನಪಿದೆ ಆ ನೆನಪಿನ ಪುಟಗಳನ್ನು ಮತ್ತೆ ಇವರು ತೆರೆಸುತ್ತಿದ್ದಾರೆ ತನ್ನ ಅಸ್ತಂಗತದಲ್ಲಿ.ಗೊರ್ರ್ ಗೊರ್ರ್ ಸದ್ದು ಮಾಡುತ್ತ ಕಣ್ಣು ಬಿಟ್ಟುಕೊಂಡೇ ಯೊವುದೋ ಲೋಕದಲ್ಲಿ ವಿಹರಿಸುತ್ತಿದ್ದವರು ಮತ್ತೆ ತನ್ನ ಮುಖದ ಹತ್ತಿರ ಕೈ ತಂದು ಏನೋ ತಡಕಾಡಲು ಶುರು ಮಾಡಿದರು.
ಗೋಡೆ.....
ತಡೆಗೋಡೆ....,
ಅವರಿಗೆ ಆದಸ್ಟು ಬೇಗ ಸಾವಿನ ಬೆಳಕು ಬೇಕಿತ್ತು. ಆ ಸಾವಿಗೆ ಅವರು ಮಲಗಿದ್ದ ಕೋಣೆಯ ಗೋಡೆ ಅಡ್ಡವಾಗಿದೆ ಎಂದುಕೊಂಡಿದ್ದರೋ ಏನೊ, ಅವರಿಗೆ ಆ ಕೋಣೆ ಬೇಡವಾಗಿತ್ತು.ಯಾವತ್ತೂ ಕೋಣೆಯೊಳಗಿನ ಜೀವನವನ್ನು ಬಯಸಿದವರಲ್ಲ ...ಈಗ ಗೋಡೆಯಾಚೆ ಸರಿಸುವಂತೆ ಅಂಗಲಾಚುತಿದ್ದರು ,ಆ ಗೋಡೆ ಸರಿಸಿ ಹಾಲಿಗೆ ಬಂದರೆ ಹಸಿರು ಕಾಣಬಹುದು ಅನ್ನುವ ಆಸೆಯೋ ಏನೊ.ಅವರ ಅಂಗಲಾಚುವಿಕೆಯಲ್ಲಿ ಕೈಲಾಗದವಳೆಂಬ ದುಖವಿತ್ತು....ಒಂದು ಸರ್ತಿ ನನ್ನನ್ನ ಅರ್ಪಿಸಿಕೊಂಡುಬಿಟ್ರೆ ಸಾಕು ಅನ್ನುವ ಸಂಕಟದ ನಿವೇದನೆಇತ್ತು..ಆದರೆ ನಮಗೆ ಅದು ಅವರ ಕೆಟ್ಟ ಹಟ ಆಗಿತ್ತು.ಅದನ್ನೆ ಕೆಲವೊಂದು ಸರ್ತಿ ಅವರನ್ನು ನಾಲ್ಕೈದು ತಲೆದಿಂಬು ಗೋಡೆಗಾನಿಸಿ ಒರಗಿಸಿ ಕತೆ ತರಹ ಹೇಳಿದಾಗ ನಾನು ಆ ತರದವಳಲ್ಲ ಎಂದು ಹೇಳುವ ಪ್ರಯತ್ನ ಮಾಡುತಿದ್ದರು.
ಕತೆಹೇಳ್ತ ಹೇಳ್ತ ಊಟದ ತಟ್ಟೆ ತಂದರೆ ಮಕ್ಕಳಂತೆ ಮುಖ ಗೋಡೆಗೆ ಮುತ್ತು ಕೊಡುತ್ತಿತ್ತು.ಮಕ್ಕಳಿಗು ಮುದುಕರಿಗು ವ್ಯತ್ಯಾಸ ಇಲ್ಲ ಅನ್ನುವ ಮಾತಿಗೆ ಎಲ್ಲೂ ಚ್ಯುತಿ ಬರದಂತೆ ನಡೆದುಕೊಳ್ಳುತ್ತಿದ್ದರು.ಜೊತೆಗೆ ಮರಿಮಕ್ಕಳೊಂದಿಗೆ ಜಗಳಕ್ಕಿಳಿದು ಕೈಲಾಗದೆ ತನ್ನ ಬೆರಳನ್ನು ಹಲ್ಲಿಲ್ಲದ ಬಾಯಿಯಿಂದ ಕಚ್ಚಿಕೊಳ್ಳುವ ಅಂದವನ್ನು ಹೇಗೆ ಹೇಳಳಿ.
ನಾನು ಕಂಡ ನನ್ನ ತಿಳುವಳಿಕೆಯ ಮುವತ್ತನಾಲ್ಕು ವರುಶಗಳ ಅಜ್ಜಿಯ ೯೦ರ ಮೇಲಿನ ದೇಹ ಯಾವತ್ತೂ ಸ್ವಾಸ್ಥ್ಯ ಕೆದಿಸಿಕೊಂಡಿದ್ದೆ ಇಲ್ಲ ಆರೋಗ್ಯ ಮತ್ತು ಮನಸ್ಸು ಎರಡರಲ್ಲು.ಮಕ್ಕಳಿಗಾಗಿ ಮೊಮ್ಮಕ್ಕಳಿಗಾಗಿ ಸದಾ ಯೋಚಿಸುವವರು,ದೇವರಲ್ಲಿ ಬೇಡುವವರು....ಆದರೆ ಗಂಡ ಜೀವಂತ ಇರುವವರೆಗೂ ಅವರೊಂದಿಗೆ ಸದಾ ಅರೆ ಮುನಿಸು ಮನೆಯವರೊಂದಿಗೆ ಗಂಡನ ಬಗ್ಗೆ ಏನಾದರೊಂದು ದೂರು ಸರ್ವೇ ಸಾಮಾನ್ಯ ಆಗಿತ್ತು.ಗಂಡ ಸತ್ತ ನಂತರ ಅವರ ನೆಪದಲ್ಲೇ ಕೊರಗುತ್ತಿದ್ದರು,ಜೋರಾಗಿ ಆಕಳಿಕೆ ಬಂದರೂ ಅವರೇ ಬಂದಿದ್ದಾರೆ ಅವರಿಗೇನೊ ಸಮಾಧಾನ ಆಗಿಲ್ಲ ಅನ್ನೋತರ ಮಾತಾಡಿ ಎಲ್ಲರಿಂದಲೂ ನಗಿಸಿಕೊಳ್ಳುತ್ತಿದ್ದರು, ಜೊತೆಗೆ ಕೆಲಸದವರಿಂದಲೂ ಕೆಲಸರ್ತಿ ಅಪಹಾಸ್ಯಕ್ಕೊಳಗಾಗಿ ತನ್ನನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ ಎಂಬಂತೆ ಒಂಟಿಯಾಗಿ ಕೊರಗುತ್ತಿದ್ದರು.
ಇವತ್ತು ಮೊಮ್ಮಕ್ಕಳ ದೇಹವೂ ಗಟ್ಟಿಯಾಗಿದೆ ಅಂದರೆ ಚಿಕ್ಕಂದಿನಲ್ಲಿ ಹಸು ಹಾಲು ಕುಡಿದಿರುವುದು ಮಾತ್ರವಲ್ಲ......ಆ ಹಸುವಿಗೆ
ಚಳಿ ಮಳೆ ಬಿಸಿಲೆನ್ನದೆ ಅಜ್ಜಿ ಹೊತ್ತುತಂದು ಹಾಕಿದ ಹುಲ್ಲು ಕಾರಣ ಈ ರೀತಿಯ ಕೆಲಸಗಳು ಅವರಿಂದ ನಿರಂತರವಾಗಿ ನಡೀತಾ ಇತ್ತು......ನೆನಪಿಗೆ ಬಂದಾಗ ಜುಮ್ ಅನ್ನುತ್ತದೆ ಎಶ್ಟು ಸರ್ತಿ ಹುಲ್ಲಿನೊಂದಿಗೆ ತನ್ನ ಕೈಬೆರಳುಗಳನ್ನೂ ಕೊಯ್ದುಕೊಂಡಿಲ್ಲ ರಕ್ತ ತೊಟ್ಟಿಕ್ಕಿಲ್ಲ ಅದನ್ನೆಲ್ಲ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ, ಅವರಲ್ಲಿದ್ದುದು ಹಸುವಿನ ಹೊಟ್ಟೆ ತುಂಬಿಸೋದು ಅದರಿಂದಮಕ್ಕಳಿಗೆಶ್ಟು ಹಾಲು ಸಿಕ್ತು ಅನ್ನುವುದು ಮಕ್ಕಳು ....,ನಕ್ಕರೋ ಅಜ್ಜಿಗೆ ನೆಮ್ಮದಿ.
ಇವತ್ತು ಕಾಲಚಕ್ರದ ತೀರ್ಮಾನಕ್ಕೆ ಸಿಕ್ಕ ಆ ದೇಹ ತೇಯ್ದ ಗಂಧದ ಕೊರಡು.....ಬತ್ತಿ ಹೋಗಿದೆ.....ಸುಕ್ಕುಗಟ್ಟಿದೆ......ಅರ್ಧ ಚಂದ್ರಾಕ್ರತಿಯಾಗಿದೆ...ದೊಡ್ಡ (ಅಜ್ಜಿ)ಅನ್ನುವ ಘಮ್ಮೆನ್ನುವ ಪರಿಮಳ ಮಾತ್ರ ಸೂಸುತ್ತಿದೆ. ಮುಟ್ಟಿದರೆ ಮಾತ್ರ ತನ್ನ ಇರುವನ್ನು ಕೈ ಸ್ಪರ್ಶಕ್ಕಾಗುವಶ್ಟು ಉಸಿರಿನ ಬೆಚ್ಚನೆಯನಿಟ್ಟು ಕರಕೊಂಡು ಹೋಗುವವನಿಗೆ ಕಾಯುತ್ತಿದೆ.
ಮೊಮ್ಮಗನ ಅಕಾಲಿಕ ಸಾವಾದಾಗ ಅವರಾಡಿದ್ದ ಮಾತುಗಳು ಈಗಲೂ ನೆನಪಿದೆ ಕರ್ಕೋಬಾರ್ದಿತ್ತ ದೇವ್ರೆ ಎಳೆಉಸಿರ ಬದಲು ನನ್ನನ್ನು....ಹಾಸಿಗೆ ಹಿಡಿದು ಮಲಗಿದ್ದ ಪುಟ್ಟ ಮೊಮ್ಮಗನ ಚಿಕ್ಕ ದೇಹದ ಮುಂದೆ ಆ "ದೊಡ್ಡ" ಜೀವ ದಿನಾ ದೇವರಲ್ಲಿ ಬೇಡುತ್ತಿದ್ದುದು ಒಂದೆ ಮಗೂನ ನಮ್ಮ ಕೈಗೆ ಬಿಸಾಕಪ್ಪಾ ಎಂದು .....ಆದರೂ ಅರ್ಥವಿಲ್ಲದ ಸಾವನ್ನು ಜಾಣ ಕಿವುಡು ಪ್ರದರ್ಶಿಸುತ್ತಲೆ ಕೈಮುಗಿಸಿಕೊಂಡ ದೇವರು ದಯಪಾಲಿಸಿದ್ದರು.ಆವತ್ತು ಆ ರೀತಿ ಬೇಡಿಕೊಂಡಿದ್ದ ಜೀವ ಇಂದು ನನ್ನನ್ಯಾಕೆ ಇನ್ನೂ ಕಾಯಿಸ್ತೀಯ ಅಂತಿದೆ ಅದೇ ದೇವರಲ್ಲಿ.
ಅಳಿಯ ಸತ್ತಾಗಲೂ ಅದನ್ನೇ ಬೇಡಿಕೊಡಿತ್ತು ದೊಡ್ಡ (ಅಜ್ಜಿ)
ಹಿಂದೊಮ್ಮೆ ಮಗ ಸತ್ತಾಗಲೂ.....
ದೊಡ್ಡ ಅಂದರೆ ನನ್ನ ಅಮ್ಮನ ಅಮ್ಮ
ಹಾಗಾದರೆ ಅಮ್ಮ ಇರುವುದೆ ತ್ಯಾಗದ ಅರ್ಥಕ್ಕಾಗಿಯಾ...?ಸಾಮೀಪ್ಯದ ಇನ್ನೊಬ್ಬರ ಸಾವಿಗಿಂತ ತನಗೇ ಬಂದಿದ್ದರೆ ಒಳ್ಳೆಯದು ಎಂಬುದಕ್ಕಾಗಿಯೋ......
ಹೊತ್ತು ಹುಟ್ಟುವ ಮೊದಲೇ ಎದ್ದು....ಹೊತ್ತು ಮಲಗಿದ ನಂತರವೂ ಎಚ್ಚೆತ್ತುಕೊಂದೇ ಇದ್ದು ತನ್ನವರಿಗಾಗಿ ಚಿಂತಿಸುವುದೆ ಅಮ್ಮಂದಿರ ಹುಟ್ಟುಗುಣಾನ... ಅಥವ ಆ ಹುಟ್ಟೇ ಅದಕ್ಕಾಗಿಯೋ....ಶಾಪವೋ....ಹಿಂದಿನ ಜನ್ಮದ ಶಾಪ ವಿಮೋಚನೆಯೋ...
ಅಥವ ಸ್ರಸ್ಟಿಯ ತಾರತಮ್ಯವೋ.....
ನೂರಾರು ಮೆಟ್ಟಿಲುಗಳ ಅಂಕಣ ...ಆಟ ಆಡೋರು...ಆಡ್ಸೋರು...ಹರಟೆ ಹೊಡೆಯೋರು....ಹೊತ್ತು ಕಳೆಯೋರು....ಗೊತ್ತುಗುರಿಇಲ್ಲದವರು...ಪವಿತ್ರಸ್ನಾನಮಾಡೋರು.......ಪೂಜೆ ಪುನಸ್ಕಾರಕ್ಕೆ ಬರೋರು....ಈ ರೀತಿಯ ಎಲ್ಲರಿಗು ಒಳ್ಳೆಯದನ್ನೆ ಬಯಸುತ್ತದೆ "ಕಲ್ಯಾಣಿ".ದುಖದುಮ್ಮಾನಗಳಲ್ಲಿರುವವರು ತನ್ನ ಮಗ್ಗುಲಲ್ಲಿ ಕುಳಿತರೆ ಸಾಂತ್ವನ ಹೇಳುತ್ತದೆ,ಒಳ್ಳೆಯದಾಗಲೆಂದು ಸಾವಿರಮೆಟ್ಟಿಲಾಚೆ ಇರುವ ದೇವರನ್ನು ಬೇಡುತ್ತದೆ.ಎಲ್ಲವೂ ನಿಸ್ವಾರ್ಥದ ಸಾಂತ್ವನ.
ಈಗ ಅಂಥಾ ಕಲ್ಯಾಣಿಯ ಒಡಲೇ ಬತ್ತಿದರೆ....ನನಗೂ ನಿನಗೂ ಇದು ಕೊನೆಯ ನೋಟ ಎಂಬಂತೆ ನೋಡುತ್ತ....ನೋಡುತ್ತಾ..... ಬದುಕುವ ಆಸೆ ಇನ್ನೂ ಇದೆ ಎಂದು ಹೇಳುತ್ತಿದೆಯಾ ಮತ್ತೆ ಆನೋಟ ...ಮುಗಿದ ಅಧ್ಯಾಯಕ್ಕೊಂದು ಬಿಂದು ನೀರ ಕೇಳುತ್ತಿದೆಯಾ....
ಇನ್ನೊಬ್ಬರ ಕೈ ಆ ನಿಸ್ತೇಜ ಕಣ್ಣನ್ನು ಮ್ರುದುವಾಗಿ ತೀಡಿತು.
ಕಲ್ಯಾಣಿಯನ್ನು ನೆನೆದು ಒಂದು ಹನಿ ಕಣ್ಣೀರು ಒತ್ತರಿಸಿ ಬಂದರೆ ಕಲ್ಯಾಣಿ ಮತ್ತೆ ಹುಟ್ಟುವಳೇ........
ನನ್ನ ಅಜ್ಜಿಯ ಹೆಸರು "ಕಲ್ಯಾಣಿ"
ಒಂದು ಹನಿ ಕಣ್ಣೀರು ಹುಟ್ಟು ಸಾವುಗಳ ಮಧ್ಯೆ ಸಂಬಧದ ಕಮಿಟ್ಮೆಂಟುಗಳಾ......
ಬತ್ತಿಹೋಗುತ್ತಿರುವ ದೇಹದೆದುರು ಮೌನವಾಗಿ ದಿಟ್ಟಿಸುತ್ತ ಕುಳಿತಿದ್ದುದು.......ಮುಂದೆ
ನನಗೂ ಬರುವ ಸಾವಿನ ಸೋಲೊಪ್ಪಿಕೊಳ್ಳುವ...,ಎದುರಿಗಿರುವವರನ್ನು ಕಳೆದುಕೊಳ್ಳುವ ರಾಜಿಸೂತ್ರಾನ
ಕೊನೆಗಳಿಗೆ ಕಣ್ಣಿಗೆ ಕಣ್ಣುಕೊಟ್ಟು ನೆಟ್ಟ ನೋಟ...ಸಂಬಂದಗಳಿಗೆ ಸಂದಾಯವಾದ ದಿನಗಳ
ಒಟ್ಟು ಮೊತ್ತದ ಕಾಣಿಕೆಯಾ......ನನ್ನಲ್ಲು
ನಿನ್ನಲ್ಲು
0 Comments:
Post a Comment
Subscribe to Post Comments [Atom]
<< Home